
ಆನಂದಪುರ, ಶಿವಮೊಗ್ಗ ಜಿಲ್ಲೆ:
ದೇಶದ ಎರಡನೇ ಅತಿಉದ್ದದ ಕೇಬಲ್ ಆಧಾರಿತ ಐತಿಹಾಸಿಕ ಅಂಬಾರಗೊಂಡ್ಲು–ಕಳಸವಳ್ಳಿ–ಸಿಗಂದೂರು ಸೇತುವೆ ಲೋಕಾರ್ಪಣೆಯಾದ ಬೆನ್ನಲ್ಲೇ, ಈ ಬೃಹತ್ ಅಭಿವೃದ್ಧಿ ಯೋಜನೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಕ್ಕೆ ಸಂಸದ ಶ್ರೀ ಬಿ ವೈ ರಾಘವೇಂದ್ರ ಅವರಿಗೆ ಸ್ಥಳೀಯರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸೇತುವೆ ಉದ್ಘಾಟನೆಯಾದ ಬಳಿಕ, ಈಗಾಗಲೇ ಸ್ಥಳೀಯರು, ಭಕ್ತಾದಿಗಳು ಹಾಗೂ ಪ್ರವಾಸಿಗರು ಸುಂದರ ದೃಶ್ಯಾವಳಿಗಳ ನಡುವೆ ಸಂಚರಿಸುತ್ತಿದ್ದು, ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಹೋಗುವ ಪ್ರವಾಹ ಕಾಲದ ತೊಂದರೆಗಳಿಗೂ ಯಥಾಶಕ್ತಿ ಪರಿಹಾರ ಲಭಿಸಿದೆ. ನದಿ ದಾಟುವ ಸ್ಪೀಡ್ ಬೋಟ್, ಹಡಗು ಸೇವೆಗಳ ಅವಲಂಬನೆಯಿಂದ ಮುಕ್ತರಾಗಿರುವ ಜನರು ಈ ಸೇತುವೆಯನ್ನು ‘ಹೆಮ್ಮೆ ಮತ್ತು ಸಂಭ್ರಮದ ಸಂಕೇತ’ ಎಂದು ಹೊಗಳಿದ್ದಾರೆ.
ಸ್ಥಳೀಯ ಅಭಿವೃದ್ಧಿಯ ಹರಿಕಾರ ಎನಿಸಿಕೊಂಡಿರುವ ಜನಪ್ರಿಯ ಸಂಸದ ಬಿ ವೈ ರಾಘವೇಂದ್ರ ಅವರ ಈ ಸಾರ್ಥಕ ಸಾಧನೆಗೆ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. “ಅಂಬಾರಗೊಂಡ್ಲು–ಕಳಸವಳ್ಳಿ ಸೇತುವೆ ಇಂದು ನಾಡಿನ ಹೆಮ್ಮೆ, ಇದು ಸಂಸದರ ದೃಢ ನಿಶ್ಚಯದ ಫಲ,” ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಸೇತುವೆಯಿಂದ ವಿಶೇಷವಾಗಿ ಆನಂದಪುರ, ಸಿಗಂದೂರು ಭಾಗದ ಗ್ರಾಮೀಣ ಪ್ರದೇಶದ ಜನರಿಗೆ ಸಂಪರ್ಕ ಸುಲಭವಾಗಿದ್ದು, ಆರ್ಥಿಕ, ಸಾಮಾಜಿಕ, ಧಾರ್ಮಿಕ ಹಾಗೂ ಪ್ರವಾಸೋದ್ಯಮದ ಬೆಳವಣಿಗೆಗೆ ಹೊಸ ಹಾದಿ ತೆರೆದುಕೊಂಡಿದೆ.
ಈ ಹಿನ್ನೆಲೆಯಲ್ಲಿ ವಿವಿಧ ಹಳ್ಳಿಗಳ ಗ್ರಾಮಸ್ಥರು, ದೇವಸ್ಥಾನದ ವ್ಯವಸ್ಥಾಪಕರು ಹಾಗೂ ಸ್ಥಳೀಯ ಸಂಘಟನೆಗಳ ಮುಖಂಡರು ಸಂಸದರಿಗೆ ವ್ಯಕ್ತಿಗತವಾಗಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. “ಇದು ನಮ್ಮೆಲ್ಲರ ಕನಸು. ಇಂತಹ ಐತಿಹಾಸಿಕ ಯೋಜನೆ ನನಸಾದ ಕ್ಷಣ ನಮ್ಮ ಜೀವನದಲ್ಲಿ ಮರೆಯಲಾಗದ ಕ್ಷಣವಾಗಿದೆ,” ಎಂದು ಒಂದು ಗ್ರಾಮಸ್ಥರು ಭಾವುಕವಾಗಿ ಹೇಳಿದರು.
ವರದಿ: ರಮೇಶ್ ಡಿಜಿ, ಆನಂದಪುರ – ಶಿವಮೊಗ್ಗ
ಸಾತ್ವಿಕ ನುಡಿ ದಿನಪತ್ರಿಕೆ