
ಚಿಕ್ಕನಾಯಕನಹಳ್ಳಿ:
ತಾಲೂಕಿನ ಕಂದೀಕೆರೆ ಹೋಬಳಿಯ ಆಶ್ರೀಹಾಳ ಗ್ರಾಮದಲ್ಲಿ, ಸರ್ಕಾರದ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ದಲಿತ ಯುವತಿಗೆ ಮೂರು ಕಾಮುಕ ಯುವಕರು ನಡೆಸಿದ ಅಮಾನವೀಯ ಅತ್ಯಾಚಾರ, ಗ್ರಾಮದಲ್ಲಿ ಭಾರೀ ಶೋಕ ಹಾಗೂ ಆಕ್ರೋಶದ ಭಾವನೆ ಹುಟ್ಟಿಸಿದ್ದು, ಘಟನೆ ಬಳಿಕ ಪೊಲೀಸರ ವೇಗದ ಕ್ರಮದಿಂದ ಆರೋಪಿಗಳನ್ನು ಕೇವಲ ಒಂದು ಗಂಟೆಯೊಳಗೆ ಬಂಧಿಸಲಾಗಿದೆ.
ಘಟನೆಯ ವಿವರಗಳು ಹೀಗಿವೆ – ಜೂನ್ 9, 2025ರ ರಾತ್ರಿ ಸುಮಾರು 10:30ರ ಸಮಯದಲ್ಲಿ, ಲಿಖಿತ್ ಎಂಬಾತ ಯುವತಿಗೆ ಬೇರೆ ನಂಬರ್‌ನಿಂದ ಕರೆ ಮಾಡಿ “ಕಾಲೇಜಿನ ವಿಷಯ ಮಾತಾಡಬೇಕು” ಎಂದು ಮನೆಯಿಂದ ಹೊರಗೆ ಬರಮಾಡಿದ್ದನು. ಈಕೆಯು ಅನುಮಾನದಿಂದ ಹೊರಬಂದಿದ್ದರೂ, ಆತ ಮೊದಲಿಗೆ ಕಾಲೇಜು ಕುರಿತು ಮಾತುಕತೆ ನಡೆಸುತ್ತಾ, ಆಕೆಯನ್ನು ದೂರದ ಹೊಲದ ಕಡೆಗೆ ಕರೆದುಕೊಂಡು ಹೋಗಿದ್ದನು. ಅಲ್ಲಿಗೆ ಮುಂಚಿತವಾಗಿ ಬಂದು ಸೇರಿದ ಆತನ ಇಬ್ಬರು ಸ್ನೇಹಿತರು, ಈಕೆಯ ವಿರೋಧದ ನಡುವೆಯೂ, ಹತ್ತಿರದ ಜಮೀನಿನೊಳಗೆ ಎಳೆದು ಒಟ್ಟಾರೆ ಮೂರು ಜನರು ಸೇರಿ ಅತ್ಯಾಚಾರ ಮಾಡಿರುವುದು ಇದೀಗ ಎಫ್‌ಐಆರ್ ಮುಖಾಂತರ ಬಹಿರಂಗವಾಗಿದೆ.
ಅತ್ಯಾಚಾರಕ್ಕೆ ಒಳಗಾದ ಯುವತಿಯಿಗೆ, “ಈ ವಿಷಯ ಯಾರಿಗಾದರೂ ತಿಳಿಸಿದರೆ ನಿನ್ನ ತಂದೆಯನ್ನು ಕೊಲ್ಲುತ್ತೇವೆ” ಎಂಬ ತೀವ್ರ ಬೆದರಿಕೆ ನೀಡಿ, ಒಂದು ತಿಂಗಳ ಕಾಲ ಮೌನ ವಹಿಸುವಂತೆ ಒತ್ತಾಯಿಸಲಾಗಿತ್ತು. ಆದರೆ ಒಂದು ತಿಂಗಳ ಬಳಿಕ, ಯುವತಿ ಬಿಗಿ ಮನಸ್ಸು ಮಾಡಿಸಿ, ಪೋಷಕರಿಗೆ ನಡಿದ ಘಟನೆ ವಿವರಿಸಿದಾಗ, ಶಾಕ್‌ನಲ್ಲಿದ್ದ ತಂದೆ-ತಾಯಿ ಜುಲೈ 8 ರಂದು ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ತುರ್ತಾಗಿ ದೂರು ನೀಡಿದರು.
ದೂರು ದಾಖಲಾಗುತ್ತಿದ್ದಂತೆ, ಎಸ್ಐ ನದಾಫ್ ಮತ್ತು ಪಿಎಸ್‌ಐ ಯತೀಶ್ ರವರ ನೇತೃತ್ವದ ಪೊಲೀಸರು ಕಾರ್ಯಚರಣೆ ನಡೆಸಿ, ಕೇವಲ ಒಂದು ಗಂಟೆಯೊಳಗೆ ಮೂವರು ಕಾಮುಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಬಂಧಿತ ಆರೋಪಿಗಳ ಹೆಸರುಗಳು –
► ಎ1 ವಿದ್ಯಾನಂದನ್
► ಎ2 ಲಿಖಿತ್
► ಎ3 ಅಪರಿಚಿತ ಯುವಕ
ಇವರ ವಿರುದ್ಧ BNS-2023 ಕಾಯಿದೆಯ ಸೆಕ್ಷನ್ 70(1), 35(2), 3(5) ಅಡಿಯಲ್ಲಿ ಮೂಡಲಾಖೆ 108/2025 ಎಂಬ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಭೀಕರ ಕೃತ್ಯದ ವಿರುದ್ಧ ಈಗಾಗಲೇ ದಲಿತ ಮುಖಂಡರು, ಗ್ರಾಮಸ್ಥರು ಮತ್ತು ಮಾನವ ಹಕ್ಕು ಹೋರಾಟಗಾರರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣದ ನ್ಯಾಯ ಮತ್ತು ಕಠಿಣ ಶಿಕ್ಷೆಯ ಬೇಡಿಕೆ ಮುಂದಿಟ್ಟಿದ್ದಾರೆ.
ವರದಿ: ಮಂಜುನಾಥ್ ಕೆ.ಎ., ತುರುವೇಕೆರೆ
—

ವರದಿ, ಮಂಜುನಾಥ್ ಕೆ ಎ ತುರುವೇಕೆರೆ.