
ಹಾಸನ: ಸಕಲೇಶಪುರದಲ್ಲಿ ಕೋಮುಸೌಹಾರ್ಧತೆಗೆ ಧಕ್ಕೆ ತರುವ ಸಾಧ್ಯತೆ ಹಿನ್ನೆಲೆಯಲ್ಲಿ, ಹಿಂದೂ ಪರ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿಗೆ 24 ಗಂಟೆಗಳ ಪ್ರವೇಶ ನಿರ್ಬಂಧ ಹೇರಲಾಗಿದೆ. ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಬುಧವಾರ ಈ ಕುರಿತು ಆದೇಶ ಹೊರಡಿಸಿದ್ದಾರೆ.


ಹಿಂದೂ ಹಿತರಕ್ಷಣಾ ಸಮಿತಿ ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ಯಾತ್ರೆಯಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಲು ಪುನೀತ್ ಕೆರೆಹಳ್ಳಿ ಇಂದು ಸಕಲೇಶಪುರಕ್ಕೆ ಬರಬೇಕಿತ್ತು. ಆದರೆ, ಪ್ರಚೋದನಕಾರಿ ಭಾಷಣ ಮಾಡಿ ಜನರ ಭಾವನೆಗಳಿಗೆ ಧಕ್ಕೆ ತರುವ ಸಾಧ್ಯತೆ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆಯನ್ನು ಉಲ್ಲೇಖಿಸಿ, ಜಿಲ್ಲೆಯ ಎಸ್‌ಪಿ ಅವರು ಡಿಸಿಗೆ ಮನವಿ ಸಲ್ಲಿಸಿದರು.
ರಾಜ್ಯದ ಹಲವು ಠಾಣೆಗಳಲ್ಲಿ ಪುನೀತ್ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನೂ ಪೊಲೀಸ್ ಇಲಾಖೆ ಉಲ್ಲೇಖಿಸಿದೆ. ಬಿಎನ್‌ಎಸ್‌ಎಸ್ 2023ರ ಸೆಕ್ಷನ್ 163ರಡಿ ಕ್ರಮ ಕೈಗೊಂಡ ಜಿಲ್ಲಾಧಿಕಾರಿ, ಆಗಸ್ಟ್ 13 ಬೆಳಗ್ಗೆ 6 ಗಂಟೆಯಿಂದ ಆಗಸ್ಟ್ 14 ಬೆಳಗ್ಗೆ 6 ಗಂಟೆಯವರೆಗೆ ಸಕಲೇಶಪುರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ.
