
ಭಾಗಲಕೋಟೆ
ಜಮಖಂಡಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಬಿ.ಸಿ. ಟ್ರಸ್ಟ್, ಜಮಖಂಡಿ ಶಾಖೆ ಹಾಗೂ ಬನಹಟ್ಟಿ ನಗರದ ಕೆ.ಹೆಚ್.ಡಿ.ಸಿ ಕಾಲೋನಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಪರಿಸರ ಜಾಗೃತಿ, ಸಸಿ ನಾಟಿ ಮತ್ತು ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಭಾನುವಾರ ವಿಜೃಂಭಣೆಯಿಂದ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮವನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಪ್ರಧಾನ ಗುರುಗಳು ಸಿ.ಎಚ್. ಬುದ್ನಿ ಸರ್ ಅವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಪರಿಸರ ಸಂರಕ್ಷಣೆ ಮೌಲ್ಯಾಧಾರಿತ ಶಿಕ್ಷಣದ ಒಂದು ಅವಿಭಾಜ್ಯ ಅಂಗವಾಗಿದೆ ಎಂದು ಅಭಿಪ್ರಾಯಪಟ್ಟರು.
ಕೃಷಿ ಅಧಿಕಾರಿ ಸಿ.ಎಸ್. ಹಿರೇಮಠ ಅವರು ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟಾಗಿ ಬೋಧಿಸಿದರು. “ಪರಿಸರ ಉಳಿಸೋಣ, ಪರಿಸರ ಬೆಳೆಸೋಣ” ಎಂಬ ಉದ್ದೇಶದೊಂದಿಗೆ ಮನೆಗೊಂದು ಮರ, ಊರಿಗೊಂದು ವನ ಎಂಬ ದೃಷ್ಟಿಕೋಣದಿಂದ ಪ್ರತಿ ಮಕ್ಕಳು ತಮ್ಮ ನಿವಾಸದ ಆವರಣದಲ್ಲಿ ಒಂದು ಸಸಿ ನಾಟಿ ಮಾಡಬೇಕು ಎಂದು ಸಲಹೆ ನೀಡಿದರು. ಜೊತೆಗೆ ಧರ್ಮಸ್ಥಳ ಯೋಜನೆಯ ಇತರೆ ಪರಿಸರ ಕಾರ್ಯಗಳ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪುರಸ್ಕಾರ ನೀಡಿ ಸ್ಮರಣಿಕೆಯನ್ನು ನೀಡಲಾಯಿತು.
ಪರಿವಾರದಲ್ಲಿ ಬನಹಟ್ಟಿ ವಲಯ ಮೇಲ್ವಿಚಾರಕ ಶಿವಾನಂದ ಎಂ.ವೈ., ಸೇವಾಪ್ರತಿನಿಧಿ ಗೀತಾ ಶಿಂಘೆ, ಶಾಲೆಯ ಶಿಕ್ಷಕರು ಬಿ.ವಿ. ತೆಗ್ಗಿ, ಎಸ್.ಪಿ. ಮಿರ್ಜಿ, ಸಿ.ಬಿ. ಜೈನಪುರ, ಎಸ್.ಎಂ. ಕಿತ್ತೂರು, ವಿ.ಜಿ. ಆಸಂಗಿ, ಎಸ್.ಆರ್. ಹಿಪ್ಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಹಾಗೂ ಸ್ವಸಹಾಯ ಸಂಘದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.