
ವರದಿ: ಮಂಜುನಾಥ್ ಕೆ.ಎ., ತುರುವೇಕೆರೆ
ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ ಬುಧವಾರ ಮಧ್ಯಾಹ್ನ ಅಚ್ಚರಿಯಂತೆ ಸಂಭವಿಸಿದ ಚಿರತೆ ದಾಳಿಯ ಘಟನೆ ಗ್ರಾಮಸ್ಥರಲ್ಲಿ ಭಯದ ತೀವ್ರ ವಾತಾವರಣವನ್ನು ಸೃಷ್ಟಿಸಿದೆ. ಕಂದಾಯ ಇಲಾಖೆ ತಹಶೀಲ್ದಾರ್ ಕುಂಹಿ ಅಹಮದ್ ಅವರ ನೇತೃತ್ವದಲ್ಲಿ ಜರುಗುತ್ತಿದ್ದ ಗ್ರಾಮ ಗುರುತಿಸುವ ಕಾರ್ಯದ ವೇಳೆ, ಅರಣ್ಯದಿಂದ ಹೊರಬಂದ ಚಿರತೆ ಅಧಿಕಾರಿಗಳ ತಂಡ ಹಾಗೂ ಗ್ರಾಮಸ್ಥರ ಮೇಲೆ ಅಚ್ಚರಿಯ ದಾಳಿಯನ್ನು ನಡೆಸಿತು.

ತಕ್ಷಣದ ಭೀತಿಯಲ್ಲಿ ಕೆಲ ಅಧಿಕಾರಿಗಳು ಓಡಿಹೋಗಿ ತಪ್ಪಿಸಿಕೊಂಡರೆ, ಒಬ್ಬ ಕಂದಾಯ ಸಿಬ್ಬಂದಿ ಮರಕ್ಕೇರಿದ ಪರಿಸ್ಥಿತಿ ಉದ್ಭವಿಸಿತು. ಅದಾದರೂ ದಾಳಿ ನಿಲ್ಲಿಸದ ಚಿರತೆ ವೃದ್ಧರೊಬ್ಬರ ಮೇಲೆ ತೀವ್ರವಾಗಿ ದಾಳಿ ಮಾಡಿ, ನಂತರ ಶೆಡ್ ಒಂದರಲ್ಲಿ ಅಡಗಿಕೊಂಡಿತು. ಗಾಯಗೊಂಡ ವೃದ್ಧನನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.

ಸದ್ಯಸ್ಥಿತಿಯಲ್ಲಿ ಸ್ಥಳಕ್ಕೆ ತಹಶೀಲ್ದಾರ್, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಭೇಟಿ ನೀಡಿದಾಗ, ಚಿರತೆ ಶೆಡ್‌ನಿಂದ ಹೊರ ಜಿಗಿದು ಮೂರು ರಿಂದ ನಾಲ್ಕು ರೈತರ ಮೇಲೆ ದಾಳಿ ನಡೆಸಿತು. ಈ ದಾಳಿಯಿಂದ ಮಹಿಳೆಯರು ಸೇರಿದಂತೆ ಹಲವು ಜನರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಯಿತು.

ಕೇವಲ ಒಂದು ಗಂಟೆಯೊಳಗೆ ಪಕ್ಕದ ದೇವಿಹಳ್ಳಿ ಗ್ರಾಮದ ಶೇಖರ್ ಎಂಬ ರೈತನ ತೋಟದಲ್ಲಿ ಚಿರತೆ ಮತ್ತೆ ಕಾಣಿಸಿಕೊಂಡು ಆತನ ಮೇಲೆ ದಾಳಿ ನಡೆಸಿತು. ತೀವ್ರವಾಗಿ ಗಾಯಗೊಂಡ ಶೇಖರ್ ಸದ್ದಿಲ್ಲದೇ ತನ್ನ ಮನೆಯೊಳಗೆ ಓಡಿ ಬಂದು ಬಾಗಿಲು ಹಾಕಿ ಪ್ರಾಣ ಉಳಿಸಿಕೊಂಡರೂ, ಚಿರತೆ ಸಹ ಮನೆಯೊಳಗೆ ನುಗ್ಗಿದ್ದು ಆತಂಕಕಾರಿಯಾಗಿದೆ. ಶೇಖರ್ ಪತ್ನಿ ಲಲಿತಮ್ಮ ಕೂಡ ಗಾಬರಿಯಿಂದ ಸ್ಥಳಕ್ಕೆ ಧಾವಿಸಿ ನೆರವಿಗಾಗಿ ಜೋರಾಗಿ ಕರೆದಿದ್ದಕ್ಕೆ ಗ್ರಾಮಸ್ಥರು ಓಡಿಕೊಂಡು ಬಂದರು.
ತಕ್ಷಣವೇ ತಹಶೀಲ್ದಾರ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಗಾಯಗೊಂಡ ಶೇಖರ್‌ನನ್ನು ಆದಿಚುಂಚನಗಿರಿ ಆಸ್ಪತ್ರೆಗೆ ಕಳುಹಿಸಿದರು. ನಂತರ, ಮೈಸೂರಿನಿಂದ ಬಂದ ಅರವಳಿಕೆ ತಜ್ಞರ ತಂಡದೊಂದಿಗೆ ಇಬ್ಬರು ಉಪವಿಭಾಗಾಧಿಕಾರಿಗಳು, ಪೋಲೀಸರು ಸೇರಿ ಎರಡು ಗಂಟೆಗಳ ಶ್ರಮದ ಬಳಿಕ ಚಿರತೆಯನ್ನು ಶಾಂತಗೊಳಿಸಿ ಸೆರೆಹಿಡಿಯುವಲ್ಲಿ ಯಶಸ್ವಿಯಾಯಿತು.
ಚಿರತೆಯ ಸೆರೆಹಿಡಿತ ನೋಡಿ ಉತ್ಸಾಹದಿಂದ ಕಾಯುತ್ತಿದ್ದ ನೂರಕ್ಕೂ ಹೆಚ್ಚು ಗ್ರಾಮಸ್ಥರಿಗೆ ದರ್ಶನ ನೀಡದ ಅರಣ್ಯ ಇಲಾಖೆ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಯಿತು. ಚಿರತೆಯನ್ನು ಪುನಃ ಸ್ಥಳೀಯ ಅರಣ್ಯದಲ್ಲೇ ಬಿಟ್ಟುಬಿಡುವರೆಂಬ ಆತಂಕ ರೈತರಲ್ಲಿ ಗಾಬರಿಯನ್ನು ಹೆಚ್ಚಿಸಿದ್ದು, ಇನ್ನು ಮುಂದೆ ಈ ಚಿರತೆಗಳು ಮತ್ತೆ ಗ್ರಾಮ ಪ್ರವೇಶ ಮಾಡುವ ಭೀತಿ ಮನೆ ಮಾಡಿದೆ. ಇದರಿಂದಾಗಿ ಈಗಾಗಲೇ ಚಿರತೆ ಕಾಟದಿಂದ ನಿದ್ದೆ ಕಳೆದುಕೊಂಡಿರುವ ರೈತರು ಇನ್ನೂ ಹೆಚ್ಚಿನ ಭದ್ರತಾ ಕ್ರಮದ ಅವಶ್ಯಕತೆ ಕುರಿತು ಪ್ರಶ್ನಿಸುತ್ತಿದ್ದಾರೆ.
ಇನ್ನೂ ಎಷ್ಟು ದಾಳಿ ನಡೆದರೂ ಅರಣ್ಯ ಇಲಾಖೆ ಎಚ್ಛೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳುವರೋ ಎಂಬುದು ಕಾದು ನೋಡಬೇಕಾಗಿದೆ.
ಸತೀಶ್ ಮುಂಚೆಮನೆ ಸಾರಥ್ಯದಲ್ಲಿ… ಬಿಗ್ ಲೈವ್ ಸುದ್ದಿ ಕ್ಷಣ ಕ್ಷಣದ ಸುದ್ದಿ ಇನ್ನಷ್ಟು ಸುದ್ದಿ ಓದಲು ಸಾತ್ವಿಕ ನುಡಿ ಮಾಸಪತ್ರಿಕೆಯ web new spage ನೋಡಿ. ಸುದ್ದಿ ಜಾಹಿರಾತುಗಳಿಗಾಗಿ ಕರೆಮಾಡಿ.
9845905838.ವಿಜಯ್ ಮುನಿಯಪ್ಪ
ಕ್ರೈಂ ವರದಿಗಾರರು
