
ಬೆಂಗಳೂರು, ಜೂನ್ 13:
ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಡ್ರಗ್ಸ್ ಜಾಲದ ಹೊಸ ಪುಟ ಬೆಳಕಿಗೆ ಬಂದಿದೆ. ಈ ಬಾರಿ ಮಾದಕ ವಸ್ತುಗಳನ್ನು ಚೂಡಿದಾರ್‌ನಲ್ಲಿ ಎರೆದು ಸಾಗಾಟ ಮಾಡುತ್ತಿದ್ದ ವಿದೇಶಿ ಯುವತಿಯನ್ನು ಸಿಸಿಬಿ ಮತ್ತು ಚಿಕ್ಕಜಾಲ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಬಂಧಿತ ಮಹಿಳೆಯ ಬಳಿ ಸಿಕ್ಕಿರುವ ಮಾದಕ ವಸ್ತುವಿನ ಮೌಲ್ಯ ಅಂದಾಜು 10 ಕೋಟಿ ರೂಪಾಯಿಗಳಷ್ಟು ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಯುವತಿ ಮೂರು ವರ್ಷಗಳ ಹಿಂದೆ ಬಿಸಿನೆಸ್ ವೀಸಾದ ಆಧಾರದಲ್ಲಿ ಭಾರತಕ್ಕೆ ಆಗಮಿಸಿದ್ದಳು. ಪ್ರಾರಂಭದಲ್ಲಿ ನವದೆಹಲಿಯಲ್ಲಿ ನೆಲೆಸಿದ್ದ ಈಕೆ, ನಂತರ ತೆಲಂಗಾಣದ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡಲು ಎಜುಕೇಶನ್ ವೀಸಾ ಪಡೆದುಕೊಂಡಿದ್ದಳು. ಆದರೆ ಕಾಲೇಜಿನಲ್ಲಿ ಪ್ರವೇಶವನ್ನೇ ಪಡೆಯದೆ, ಡ್ರಗ್ಸ್ ಪೆಡ್ಡಿಂಗ್‌ನ ದುಷ್ಕೃತ್ಯಕ್ಕೆ ಇಳಿದಿದ್ದಳು ಎಂಬ ಶಂಕೆಯ ಮಾಹಿತಿ ಇರುತ್ತದೆ.
ಸದ್ಯ, ಮಹಿಳೆ ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲಿ ಡ್ರಗ್ಸ್ ಪೂರೈಕೆ ಜಾಲವನ್ನು ಹರಡುತ್ತಿದ್ದ ಅನುಮಾನ ಇದೆ. ಪೊಲೀಸರು ಆಕೆಯಿಂದ ಹೆಚ್ಚಿನ ಮಾಹಿತಿ ಕಲೆಹಾಕುವಲ್ಲಿ ತೊಡಗಿದ್ದು, ಈಕೆಯ ಸಂಪರ್ಕ ಹೊಂದಿದ್ದ ಮತ್ತೊಬ್ಬರು ಯಾರಾಗಿದ್ದಾರೆ ಎಂಬ ವಿಚಾರದಲ್ಲಿ ತನಿಖೆ ಮುಂದುವರೆದಿದೆ. ಯುವತಿಯು ಡ್ರಗ್ಸ್ ಅನ್ನು ಚೂಡಿದಾರ್ ಒಳಬಾಗದಲ್ಲಿಟ್ಟುಕೊಂಡು ಸಾಗಾಟ ಮಾಡುತ್ತಿದ್ದ ರೀತಿ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ.
ಪೊಲೀಸರು ವಶಪಡಿಸಿಕೊಂಡಿರುವ ಮಾದಕ ವಸ್ತು ಎಂಡಿಎಂಎ (MDMA) ಎಂಬುದು ಪ್ರಬಲ ಕೆಮಿಕಲ್ ಡ್ರಗ್ ಆಗಿದ್ದು, ದೇಶದಲ್ಲಿ ಇತ್ತೀಚೆಗೆ ಹೆಚ್ಚು ಬೇಡಿಕೆಯಲ್ಲಿದೆ. ಈ ಪ್ರಕರಣವು ಅಂತರಾಷ್ಟ್ರೀಯ ಡ್ರಗ್ಸ್ ಜಾಲದ ನಂಟು ಹೊಂದಿದಿರುವ ಸಾಧ್ಯತೆ ಇದ್ದು, ತನಿಖೆ ಆ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.