
ಮಲ್ಪೆ: 18 ಮಾರ್ಚ್ 2025 ರಂದು ಮಲ್ಪೆ ಬಂದರಿನಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 32/2025 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಪ್ರಮುಖ ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಘಟನೆಯ ಬಳಿಕ, ಮಲ್ಪೆ ಬಂದರಿನ ಮೀನುಗಾರರ ಸಮಸ್ಯೆಗಳನ್ನು ಹಾಗೂ ಶಾಂತಿ ಮತ್ತು ಸೌಹಾರ್ಧತೆಯಿಂದ ಈ ಪ್ರಕರಣವನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಚರ್ಚಿಸಲು ಮಲ್ಪೆ ಮೀನುಗಾರರ ಸಂಘ (ರಿ) ಹಾಗೂ ಇತರ ಪ್ರಮುಖ ಮೀನುಗಾರಿಕಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ 22 ಮಾರ್ಚ್ 2025 ರಂದು ಮಲ್ಪೆ ಬಂದರು ಪ್ರದೇಶದಲ್ಲಿ ಪ್ರತಿಭಟನಾ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಹಲವಾರು ಗಣ್ಯರು ಭಾಗವಹಿಸಿದ್ದು, ವಿವಿಧ ಮುಖಂಡರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿವಾದಾತ್ಮಕ ಹೇಳಿಕೆ,…!
ಸಭೆಯ ವೇಳೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಮಹಿಳೆಗೆ ಹಲ್ಲೆ ಮಾಡಿದ ಆರೋಪಿಗಳಿಗೆ ಬೆಂಬಲ ನೀಡುವ ಶೈಲಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಅದು ಹೊಸ ಸ್ಫೋಟಕ ಬೆಳವಣಿಗೆಗೆ ಕಾರಣವಾಗಿದೆ. “ನಮ್ಮ ಮನೆಗೆ ಕಳ್ಳರು ಬಂದರೆ ನಾವು ಏನು ಮಾಡುತ್ತೇವೆ? ಪೊಲೀಸರಿಗೆ ಫೋನ್ ಮಾಡಿದರೆ 5-6 ಗಂಟೆ ತಡವಾಗಿ ಬರುತ್ತಾರೆ, ಅಷ್ಟು ಸಮಯ ನಾವು ಏನು ಮಾಡುತ್ತೇವೆ? ಕಟ್ಟಿ ಹಾಕಲೇ ಬೇಕು, ಮತ್ತೇನು ಮಾಡಲಿಕ್ಕೆ ಆಗುತ್ತೆ?” ಎಂದು ಅವರು ಪ್ರಶ್ನಿಸಿದರು.
ಆರೋಪಿತರು ಮಹಿಳೆಯನ್ನು ಹಲ್ಲೆ ಮಾಡಿರುವ ಘಟನೆಗೆ ಸಮರ್ಥನೆ ನೀಡುವಂತೆ ಅವರು ಮಾತನಾಡಿದ್ದು, “ಏನು ಅವರು ಚೂರಿಯಿಂದ, ಮಚ್ಚಿನಿಂದ ಹೊಡೆದದ್ದಾ? ಕೇವಲ ಎರಡು ಕೆನ್ನೆಗೆ ಬಾರಿಸಿದ್ದಾರೆ. ಅದು ಯಾರಿಗೆ? ಕಳ್ಳನಂತೆ ವರ್ತಿಸಿದ ವ್ಯಕ್ತಿಗೆ. ಆ ಮಹಿಳೆಗೂ ಈ ಕುರಿತು ಯಾವುದೇ ಆಕ್ಷೇಪವಿಲ್ಲ” ಎಂದು ಹೇಳಿದ್ದು, ಇದು ಜನರನ್ನು ಪ್ರಚೋದಿಸುವ ರೀತಿಯಲ್ಲಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಮಾಜಿ ಸಚಿವರ ವಿರುದ್ಧ ಕೇಸು ದಾಖಲು
ಮಾಜಿ ಸಚಿವರ ಈ ಹೇಳಿಕೆಯಿಂದ ಮಹಿಳೆಯ ವಿರುದ್ಧ ನಡೆದ ಹಲ್ಲೆ ಪ್ರಕರಣಕ್ಕೆ ರಾಜಕೀಯ ಮೊದಲು ಬಂದಿದ್ದು, ಇದನ್ನು ಜನರನ್ನು ಪ್ರಚೋದಿಸುವ, ಸಮಾಜದಲ್ಲಿ ದ್ವೇಷ ಸೃಷ್ಟಿಸುವ ಭಾಷಣ ಎಂದು ಪರಿಗಣಿಸಲಾಗಿದೆ. ಈ ಹಿನ್ನೆಲೆ ಮಲ್ಪೆ ಪೊಲೀಸ್ ಠಾಣೆ ಪಿಎಸ್‌ಐ ರವಿ ಬಿಕೆ ಅವರು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಅಪರಾಧ ಕ್ರಮಾಂಕ 34/2025 ಅಡಿಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 57 RW 191(1), 192BNS ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಪ್ರಕರಣವು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಮಾಜಿ ಸಚಿವರು ಮಹಿಳೆಗೆ ಹಲ್ಲೆ ಪ್ರಕರಣವನ್ನು ಸಮರ್ಥಿಸಿಕೊಂಡಿರುವುದು, ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿದೆ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ. ಈ ಕುರಿತು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಮುಂದಿನ ಕ್ರಮ ಏನು ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ವರದಿ : ಆರತಿ ಗಿಳಿಯಾರ್
ಉಡುಪಿ ವರದಿಗಾರರು
