
ಹಾಸನ, ಜೂನ್ 17 – ಹಾಸನ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿ ಶ್ರೀಮತಿ ಸತ್ಯಭಾಮಾ ಸಿ ಅವರನ್ನು ರಾಜ್ಯ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಬೆಂಗಳೂರುಗೆ ವರ್ಗಾವಣೆ ಮಾಡಿದ್ದು, ಅವರ ಸ್ಥಾನಕ್ಕೆ ಲತಾ ಕುಮಾರಿ ಕೆ.ಎಸ್. ಅವರನ್ನು ಹೊಸ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ.
ಸತ್ಯಭಾಮಾ ಸಿ ಅವರನ್ನು ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ ರಾಜ್ಯ ಯೋಜನಾ ನಿರ್ದೇಶಕರಾಗಿ ವರ್ಗಾಯಿಸಲಾಗಿದ್ದು, ಈ ಕುರಿತು ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಹಾಸನ ಜಿಲ್ಲೆಯಲ್ಲಿ ತಮ್ಮ ಪ್ರಾಮಾಣಿಕ ಕಾರ್ಯಪಟುತೆಯಿಂದ ಜನಮನ್ನಣೆ ಗಳಿಸಿದ್ದ ಸತ್ಯಭಾಮಾ ಅವರ ಬದಲಾವಣೆಯ ಸುದ್ದಿ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಹೊಸ ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ಲತಾ ಕುಮಾರಿ ಕೆ.ಎಸ್. ಅವರು ಈ ಹಿಂದೆ ಬೆಂಗಳೂರು ನಗರ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಹಿರಿಯತೆ, ಅನುಭವ ಮತ್ತು ಆಡಳಿತ ಸಾಮರ್ಥ್ಯ ಹೊಂದಿರುವ ಅವರು ಹಾಸನ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ನೂತನ ಚೈತನ್ಯ ನೀಡುವ ನಿರೀಕ್ಷೆಯಿದೆ.
ಜಿಲ್ಲೆಯ ಸಾರ್ವಜನಿಕರು ಹೊಸ ಜಿಲ್ಲಾಧಿಕಾರಿಗೆ ಆತ್ಮೀಯ ಸ್ವಾಗತ ವ್ಯಕ್ತಪಡಿಸುತ್ತಿದ್ದು, ಅಭಿವೃದ್ಧಿ ಯೋಜನೆಗಳು ಗತಿಯುತವಾಗುವ ಭರವಸೆ ವ್ಯಕ್ತಪಡಿಸಿದ್ದಾರೆ. ✍🏻
