
ಆಲೂರು: ರಾಜ್ಯದಲ್ಲಿ ವಿವಿಧ ಕಾರಣದಿಂದ ರೈತರು ನಷ್ಟದಲ್ಲಿದ್ದರೂ, ಸರ್ಕಾರ ನೆರವಿಗೆ ಬರುತ್ತಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ತಾಲ್ಲೂಕಿನ, ಧರ್ಮಪುರಿ ಗ್ರಾಮದಲ್ಲಿ ಮಾತನಾಡಿದ ಅವರು, ಮೆಕ್ಕೆಜೋಳಕ್ಕೆ ಬಿಳಿ ಸುಳಿ ರೋಗ ತಗುಲಿ ಬೆಳೆ ನಾಶವಾಗಿದೆ, ರೈತರು ಒಡವೆ ಗಿರವಿ ಇಟ್ಟು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ, ಈಗ ಬೆಳೆ ನಾಶವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ನಾಶವಾಗಿದೆ. ಆದರೂ ಕೃಷಿ, ತೋಟಗಾರಿಕಾ ಸಚಿವರು ಜಿಲ್ಲೆಗೆ ಭೇಟಿ ನೀಡಿಲ್ಲ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳು, ರೈತರ ಸಭೆ ನಡೆಸಲಿ ಎಂದು ಆಗ್ರಹಿಸಿದರು.
ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡಲಿ, ರೈತರ ಕಷ್ಟ ಕೇಳುತ್ತಿಲ್ಲ, ಸ್ಥಳಕ್ಕೆ ಬರಲು ಯೋಗ್ಯತೆ ಇಲ್ಲ, ರೈತರು 1 ಲಕ್ಷ ಪರಿಹಾರ ಕೊಡಲಿ ಎಂದು ಒತ್ತಾಯಿಸುತ್ತಿದ್ದಾರೆ, ಕೂಡಲೇ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ವರದಿ ತರಿಸಿಕೊಂಡು ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.
ಪರಿಹಾರ ಕೊಡಲು ದುಡ್ಡಿಲ್ಲದಿದ್ದರೆ ಸಾಲ ಮಾಡಿಕೊಡಲಿ, ಕಳೆದ ವರ್ಷ 1 ಲಕ್ಷ 5 ಸಾವಿರ ಕೋಟಿ ಸಾಲ ಮಾಡಿದ್ದೀರಿ. ಈ ವರ್ಷ ಇನ್ನೂ 2 ಲಕ್ಷ ಸಾಲ ಮಾಡಿ ರೈತರನ್ನು ಉಳಿಸಿ ಎಂದರು.
ಸಾಯುತ್ತಿರುವ ರೈತರಿಗೆ ಜೀವನ ಕೊಡಿ, ಇಲ್ಲವಾದರೆ ರೈತರ ಶಾಪ ಸರ್ಕಾರಕ್ಕೆ ತಟ್ಟುತ್ತೆ, ಸರ್ವನಾಶ ಹೋಗುತ್ತೆ, ಸರ್ವನಾಶದ ಹಾದಿಯಲ್ಲಿ ಸರ್ಕಾರ ಇದೆ ಎಂದು ಕಿಡಿ ಕಾರಿದರು.
ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿ, ನಾನು ಹೇಳಿದ್ದು ನಿಜ ಆಯ್ತಲ್ಲ, ಕಾಂಗ್ರೆಸ್ ಎಂಎಲ್‍ಎ ಹೇಳುತ್ತಿದ್ದಾರೆ, ರಾಮನಗರ ಎಂಎಲ್‍ಎ ನೋಟಿಸ್ ಕೊಟ್ಟ ಮೇಲೂ ಹೇಳುತ್ತಿದ್ದಾರೆ, ಅಭಿಮಾನದಿಂದ ಹೇಳ್ತಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿಕೆ ಕೊಟ್ಟಿದ್ದಾರೆ, ಒಂದು ಕಡೆ ನೋಟಿಸ್ ಕೊಡ್ತಾರೆ, ಒಂದು ಕಡೆ ಅಭಿಮಾನ ಅಂತಾರೆ ಎಂದು ಲೇವಡಿ ಮಾಡಿದರು.
ನಾನು ಡೇಟ್ ಕೊಟ್ಟಿದ್ದೀನಿ, ಬದಲಾವಣೆ ಆದರೆ ಏನ್ ಹೇಳ್ತಾರೆ, ಕಾಂಗ್ರೆಸ್‍ನವರಿಗೆ ಓಪನ್ ಚಾಲೆಂಜ್ ಮಾಡ್ತೀನಿ. 5 ವರ್ಷ ಸಿದ್ದರಾಮಯ್ಯ ಸಿಎಂ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಲಿ, ಆ ರೀತಿ ಹೇಳಿದ್ರೆ ಅಶೋಕ್‍ದು ಗಿಳಿ ಶಾಸ್ತ್ರನೂ ಇಲ್ಲ, ಕವಡೆ ಶಾಸ್ತ್ರನೂ ಇಲ್ಲ, ಎಲೆ ಶಾಸ್ತ್ರನೂ ಇಲ್ಲ, ಡಿಕೆಶಿ ಅವರೇ ಪ್ರೆಸ್‍ಮೀಟ್ ಮಾಡಿ ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿ ಅಂತ ಹೇಳಲಿ ನಾನು ಇಲ್ಲಿಗೆ ಬಿಟ್ಟು ಬಿಡ್ತೀನಿ ಎಂದರು.
ವರದಿ: ಯೊಗೇಶ್ ಹಾಸನ