
ವರದಿ: ಮಂಜು ಗುರುಗದಹಳ್ಳಿ
ತಿಪಟೂರು: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುನ್ನತ ಸೇವೆ ಸಲ್ಲಿಸುತ್ತಿರುವ ರೈತಕವಿ ಡಾ. ಪಿ. ಶಂಕರಪ್ಪ ಬಳ್ಳೇಕಟ್ಟೆ ಅವರು “ಸ್ಟಾರ್ ಆಫ್ ಕರ್ನಾಟಕ 2025” ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರಿನ ಬನಶಂಕರಿ 2ನೇ ಹಂತದ ಜೆಎಸ್‌ಎಸ್ ಶಾಲಾ ಆವರಣದಲ್ಲಿರುವ ಶ್ರೀ ಘನಲಿಂಗ ಶಿವಯೋಗಿ ಸಭಾಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಈ ಗೌರವ ಪ್ರದಾನ ಮಾಡಲಾಯಿತು.
ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್, ರೋಟರಿ ಕ್ಲಬ್ ಹಾಗೂ ದಿನೇಶ್ ಫೌಂಡೇಶನ್ ಇವರುಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕರುನಾಡಿನ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಿ, ಅವರ ಸೇವೆಯನ್ನು ಗೌರವಿಸಲಾಯಿತು.
ಡಾ. ಪಿ. ಶಂಕರಪ್ಪಬಳ್ಳೇಕಟ್ಟೆ ಅವರು ತಮ್ಮ ಕೃಷಿಕ ಜೀವಮಾನವನ್ನೇ ಆಧಾರವಿಟ್ಟುಕೊಂಡು ಸಾಹಿತ್ಯ ಸೃಷ್ಟಿಸುವ ಮೂಲಕ, ಗ್ರಾಮೀಣ ಬದುಕಿನ ಸೂಕ್ಷ್ಮ ಭಾವನೆಗಳನ್ನು ಸಾಹಿತ್ಯದಲ್ಲಿ ಬಿಂಬಿಸುತ್ತಿದ್ದಾರೆ. ಕೃಷಿಕರ ನೋವಿನ ಕಥನ, ನಾಡು-ನುಡಿ, ನೈಜ ಬದುಕಿನ ಸಂಗತಿಗಳನ್ನು ಕವಿತೆಗಳ ಮೂಲಕ ಪ್ರಭಾವಶೀಲವಾಗಿ ವ್ಯಕ್ತಪಡಿಸುವಲ್ಲಿ ಅವರು ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಈ ಹಿನ್ನಲೆಯಲ್ಲಿ “ಸ್ಟಾರ್ ಆಫ್ ಕರ್ನಾಟಕ 2025” ಪ್ರಶಸ್ತಿ ಅವರನ್ನು ತಲುಪಿರುವುದು ಹೆಮ್ಮೆಯ ಸಂಗತಿಯಾಗಿದ್ದು, ತಿಪಟೂರಿನ ಹೆಮ್ಮೆ ಹೆಚ್ಚಿಸಿದೆ.
ಕಾರ್ಯಕ್ರಮದಲ್ಲಿ ಕಾವ್ಯಶ್ರೀ ಟ್ರಸ್ಟ್ ಅಧ್ಯಕ್ಷ ಡಾ. ಜಿ. ಶಿವಣ್ಣ, ಉಪಾಧ್ಯಕ್ಷೆ ರಮ್ಯ ಚಲುವಮೂರ್ತಿ, ಸಾಹಿತಿಗಳಾದ ಅಶ್ವಿನಿ ನಕ್ಷತ್ರ, ಡಾ. ಶ್ವೇತಾ ಪ್ರಕಾಶ್, ಸಂಗೀತ ಮಠಪತಿ ವೀರೇಶ್, ಮಿನಾಕ್ಷಿ ಉಟಗಿ, ಚಂದ್ರಶೇಖರ್ ಮಾಡಲಗೆರಿ, ಚಿತ್ರನಟಿ ಮಾಲತಿಶ್ರೀ ಮೈಸೂರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಅವರು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸುತ್ತಾ ಕನ್ನಡ ಭಾಷೆ ಮತ್ತು ಸಾಹಿತ್ಯ ಅಭಿವೃದ್ಧಿಗೆ ನೀಡುತ್ತಿರುವ ಸೇವೆಗೆ ಶ್ಲಾಘನೆ ಸಲ್ಲಿಸಿದರು.
ಸಾಹಿತ್ಯ, ಸಾಮಾಜಿಕ ಸೇವೆ, ಮತ್ತು ನಾಡು-ನುಡಿಗೆ ನೀಡಿರುವ ನಿಷ್ಠೆಯ ಸೇವೆಗಾಗಿ ಡಾ. ಪಿ. ಶಂಕರಪ್ಪಬಳ್ಳೇಕಟ್ಟೆ ಅವರು ಈ ರೀತಿಯ ಪ್ರಶಸ್ತಿಗೆ ಪಾತ್ರರಾಗಿರುವುದು ಇತರರಿಗೂ ಪ್ರೇರಣೆಯಾಗಲಿ ಎಂಬುದು ಹಿತೈಷಿಗಳ ಆಶಯ. ಸಮಾರಂಭದ ಕೊನೆಗೆ ಕೃತಜ್ಞತೆ ವ್ಯಕ್ತಪಡಿಸಿ, ನಾಡು ನುಡಿಗಾಗಿ ಇನ್ನಷ್ಟು ಸೇವೆ ಸಲ್ಲಿಸುವೆ ಎಂಬ ಭರವಸೆಯನ್ನು ಡಾ. ಶಂಕರಪ್ಪಬಳ್ಳೇಕಟ್ಟೆ ಅವರು ವ್ಯಕ್ತಪಡಿಸಿದರು.