
ಶಿವಮೊಗ್ಗ.ಆನಂದಪುರ:
ರಾಜ್ಯದ ಅತಿ ದೊಡ್ಡ ಕೇಬಲ್ ನೆಟ್ವರ್ಕ್ ಬ್ರಿಡ್ಜ್ ಆಗಿರುವ ಸಿಗಂದೂರು ಸೇತುವೆಯ ಕೊನೆಯ ಹಂತದ ಕಾಮಗಾರಿ ಮಂಗಳವಾರ ಇಂದು ಮುಕ್ತಾಯದ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ಸೇತುವೆ ಕಾಮಗಾರಿಯ ವೀಕ್ಷಣೆ ಹಾಗೂ ಉದ್ಘಾಟನೆಗೆ ದಿನಾಂಕ ನಿಗದಿ ಕುರಿತು ಮಹತ್ವದ ಸಭೆ ಮತ್ತು ಭೇಟಿ ಕಾರ್ಯಕ್ರಮ ನಡೆಯಿತು.
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಮತ್ತು ಶಿವಮೊಗ್ಗ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಇಂದು ಬೆಳಗ್ಗೆ ಆನಂದಪುರಕ್ಕೆ ಆಗಮಿಸಿ, ಈ ಸೇತುವೆ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು. ಬ್ರಿಡ್ಜ್ ಕಾಮಗಾರಿ ಶೀಘ್ರ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ. ಉಳಿದಿರುವ ಕೆಲವೇ ತಾಂತ್ರಿಕ ಪ್ರಕ್ರಿಯೆಗಳ ನಂತರ ದಿನಾಂಕ ನಿಗದಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಆನಂದಪುರದ ದಾಸಕಪದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಇಬ್ಬರಿಗೂ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರತ್ನಾಕರ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು, ಹಾಗೂ ಜನತೆ ಈ ಕಾರ್ಯಕ್ರಮದಲ್ಲಿ ಭಾಗಿ ಹೊಂದಿದ್ದರು.
ಸನ್ಮಾನ ಕಾರ್ಯಕ್ರಮದಲ್ಲಿ ಆನಂದಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೆ. ಗುರುರಾಜ್, ಮೋಹನ್, ಭರ್ಮಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು. ಕಾರ್ಯಕ್ರಮದ ಉದ್ದಕ್ಕೂ ಸ್ಥಳೀಯ ಜನತೆ ಹಾಗೂ ಕಾರ್ಯಕರ್ತರಲ್ಲಿ ಭಾರೀ ಉತ್ಸಾಹವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, “ಸಿಗಂದೂರು ಸೇತುವೆ ಕರ್ನಾಟಕದ ಭವಿಷ್ಯವನ್ನು ಬದಲಾಯಿಸಬಲ್ಲ ವಿಕಾಸಾತ್ಮಕ ಯೋಜನೆಯಾಗಿದೆ. ಈ ಸೇತುವೆ ಕೇವಲ ರಸ್ತೆ ಸಂಪರ್ಕವಲ್ಲ, ಇದು ಜನರ ಬದುಕಿನ ಮಾರ್ಗವನ್ನು ಸುಲಭಗೊಳಿಸಲಿದೆ. ಉದ್ಘಾಟನೆಗೂ ಮುನ್ನ ಎಲ್ಲ ತಂತ್ರಜ್ಞಾನ ತಪಾಸಣೆ ಪೂರ್ಣಗೊಳ್ಳಲಿದೆ,” ಎಂದು ತಿಳಿಸಿದರು.
ಸಮಾರೋಪವಾಗಿ, ಸಿಗಂದೂರು ಸೇತುವೆ ಉದ್ಘಾಟನೆಗೆ ದಿನಾಂಕವನ್ನು ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಘೋಷಿಸುವ ಬಗ್ಗೆ ಭರವಸೆ ನೀಡಲಾಯಿತು. ಈ ಮಹತ್ವದ ಘಟ್ಟದಲ್ಲಿ ಭಾಗಿಯಾದ ಜನತೆ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.
ವರದಿ :ರಮೇಶ್ ಡಿಜಿ ಆನಂದಪುರ