
ತುಮಕೂರು
ತುಮಕೂರು ನಗರದ ಸಂಚಾರಿ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ರಾಘವೇಂದ್ರ ಕ್ಷತ್ರಿಯವರು ಹೃದಯ ಸ್ತಂಭನವಾಗಿದ್ದ ಕೆ ಎಸ್ ಆರ್ ಟಿ ಸಿ ಬಸ್ ಚಾಲಕರನ್ನು ಸಮಯಪ್ರಜ್ಞೆಯಿಂದ ಉಳಿಸಿ ಸಾಹಸ ಮೆರೆದಿದ್ದಾರೆ. ಈ ಘಟನೆ ಜಿಲ್ಲೆಯಿಂದ ಗದಗಕ್ಕೆ ಲೋಕಸಭಾ ಚುನಾವಣಾ ಬಂದೋಬಸ್ತ್ ಕರ್ತವ್ಯಕ್ಕೆಂದು ತೆರಳುವ ವೇಳೆ ನಡೆದಿದೆ. ಬಸ್ ಚಾಲಕರಿಗೆ ಹೃದಯ ಸ್ತಂಭನವಾಗಿದ್ದು, ಇದು ರಾಘವೇಂದ್ರ ಕ್ಷತ್ರಿಯವರ ಗಮನಕ್ಕೆ ಬಂದ ಕೂಡಲೆ ಅವರು ತಕ್ಷಣ ಕ್ರಮ ಕೈಗೊಂಡು, ಚಾಲಕರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವಂತೆ ಯೋಜನೆ ಮಾಡಿದ್ದಾರೆ.
ಈ ತುರ್ತು ಪರಿಸ್ಥಿತಿಯಲ್ಲಿ ರಾಘವೇಂದ್ರ ಅವರ ತಕ್ಷಣದ ಕಾರ್ಯಚರಣೆಯಿಂದ ಚಾಲಕರ ಪ್ರಾಣ ಉಳಿದವು ಮಾತ್ರವಲ್ಲ, ಬಸ್‌ನಲ್ಲಿ ಇದ್ದ ಪೋಲೀಸರು ಮತ್ತು ಇತರ ಪ್ರಯಾಣಿಕರ ಪ್ರಾಣ ಕೂಡಾ ಸುರಕ್ಷಿತವಾಗಿವೆ. ಕಾನ್ಸ್‌ಟೇಬಲ್ ರಾಘವೇಂದ್ರ ಅವರ ಈ ಹೆಮ್ಮೆಯ ಕಾರ್ಯಕ್ಕೆ ತುಮಕೂರು ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಕೆ. ವಿ. ಅಶೋಕ್ ಅವರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅವರು ರಾಘವೇಂದ್ರ ಕ್ಷತ್ರಿಯವರ ಸಮಯಪ್ರಜ್ಞೆ ಮತ್ತು ತ್ವರಿತ ನಿರ್ಧಾರದಿಂದ ಹಲವರ ಜೀವ ಉಳಿದಿದ್ದು, ಇದು ಇತರರಿಗೆ ಮಾದರಿಯಾಗಿರುತ್ತದೆ ಎಂದು ಶ್ಲಾಘಿಸಿದರು. ಇಂತಹ ಸಾಹಸಗಳು ನಮ್ಮ ಸಮಾಜದಲ್ಲಿ ಕಾರ್ಯನಿರ್ವಹಿಸುವ ಪೊಲೀಸರ ಮಹತ್ವವನ್ನು ಬೆಳಕಿಗೆ ತರುತ್ತವೆ ಮತ್ತು ಜನತೆಯ ಭದ್ರತೆ ಮತ್ತು ಸುರಕ್ಷತೆಗಾಗಿ ಅವರು ಹೇಗೆ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ ಎಂಬುದಕ್ಕೆ ಉದಾಹರಣೆ ಸೃಷ್ಟಿಸುತ್ತವೆ.