
ಹಾಸನ: ಮೈಗೂಡಿಸಿಕೊಂಡಿರುವ ದುರಭ್ಯಾಸಗಳನ್ನು ಬದಿಗಿಟ್ಟು ಒಳ್ಳೆಯ ಜೀವನ ಶೈಲಿ ಬೆಳೆಸಿಕೊಂಡಲ್ಲಿ ಸದೃಢ ಆರೋಗ್ಯ ಕಾಪಾಡಿ ಕೊಳ್ಳಲು ಸಾಧ್ಯ, ಜೊತೆಗೆ ಪ್ರತಿನಿತ್ಯ ಕೆಲ ಸಮಯ ವಾಕ್ ಮಾಡುವುದರ ಮೂಲಕ ಹೃದಯವನ್ನು ಉತ್ತಮವಾಗಿಟ್ಟುಕೊಂಡು ಆರೋಗ್ಯ ಕಾಪಾಡಿಕೊಳ್ಳೋಣ ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ತಿಳಿಸಿದರು.
ನಗರದ ಡಿಸಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಡಿಹೆಚ್ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಆರೋಗ್ಯಕರ ಜೀವನಕ್ಕೆ ಅನುಸರಿಸಬೇಕಾದ ಜೀವನ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಜಾಥಾ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜನರಲ್ಲಿ ಆತಂಕ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಅವರಿಗೆ ಈ ಮೂಲಕ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ, ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಭಯ ಬೇಡ, ಎಚ್ಚರ ಅಗತ್ಯ ಎಂದು ಕಿವಿಮಾತು ಹೇಳಿದ ಅವರು, ಈ ನಿಟ್ಟಿನಲ್ಲಿ ಪ್ರತಿಯೊ ಬ್ಬರೂ ಆರೋಗ್ಯಕರ ಜೀವನ ಪದ್ಧತಿ ರೂಢಿಸಿಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಅವರು ಈಗಾಗಲೇ ಸಭೆ ನಡೆಸಿ ಶಾಲಾ-ಕಾಲೇಜು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಆರೋಗ್ಯ ತಪಾಸಣೆ ನಡೆಸಬೇಕೆಂದು ಸೂಚಿಸಿದ್ದಾರೆ. ಜೊತೆಗೆ ದುಶ್ಚಟಗಳ ಪರಿಣಾಮ ಬಗ್ಗೆ ಅವರಲ್ಲಿ ಅರಿವು ಮೂಡಿಸಿ, ಆರೋಗ್ಯಕರ ಜೀವನ ಶೈಲಿಗೆ ಒತ್ತು ನೀಡಬೇಕು ಎಂದು ಸೂಚನೆ ನೀಡಿದ್ದಾರೆ. ಅವರ ಎಲ್ಲಾ ಸೂಚನೆಗಳನ್ನು ಕಾರ್ಯ ರೂಪಕ್ಕೆ ತರಲು ಇದು ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ಪಿ ಮೊಹಮದ್ ಸುಜೀತಾ, ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ, ತಹಸೀಲ್ದಾರ್ ಗೀತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ||ಅನಿಲ್ ಕುಮಾರ್, ಟಿಹೆಚ್‌ಒ ಡಾ|| ವಿಜಯ್, ವೈದ್ಯರಾದ ಡಾ|| ಅಬ್ದುಲ್ ಬಶೀರ್, ಡಾ|| ದಿನೇಶ್, ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷ ಹೆಚ್.ರಮೇಶ್, ಕಾರ್ಯದರ್ಶಿ ಸಿ. ಶಿವಸ್ವಾಮಿ, ರವಿಕುಮಾರ್ ಬಲ್ಲೇನಹಳ್ಳಿ, ಜಿಲ್ಲಾ ಸಂಪುಟ ಕಾರ್ಯದರ್ಶಿ ಹೆಚ್.ಆರ್. ಚಂದ್ರೇಗೌಡ, ಮಾಜಿ ಅಧ್ಯಕ್ಷ ಹೆಚ್.ಕೆ. ನಾಗೇಶ್, ಗಿರೀಗೌಡ, ರೋಟರಿ ಕ್ಲಬ್ ಮಂಜುನಾಥ್, ಕಲಾವಿದ ಬಿ.ಟಿ. ಮಾನವ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಂಘ ಸಂಸ್ಥೆಗಳ ಮುಖಂಡರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ ✍🏻: ಯೊಗೇಶ್ ಹಾಸನ ಜಿಲ್ಲೆ