
ಪೀಣ್ಯ ದಾಸರಹಳ್ಳಿ: ದೊಡ್ಡಬಿದರುಕಲ್ಲಿನಲ್ಲಿರುವ ಹಿತ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ನಡೆದ ಮೃತದೇಹ ಹಸ್ತಾಂತರ ಸಮಾರಂಭವು ದೇಹದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿ ರೂಪಾಂತರಗೊಂಡಿತು.
ಡಾ. ರಾಮಣ್ಣವರ್ ಚಾರಿಟೇಬಲ್ ಟ್ರಸ್ಟ್ ಹಾಗೂ ಹಿತ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರವು ಜಂಟಿಯಾಗಿ ಆಯೋಜಿಸಿದ್ದ ಈ ವಿಶಿಷ್ಟ ಸಮಾರಂಭದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು, ಆಸ್ಪತ್ರೆ ಸಿಬ್ಬಂದಿ ಮತ್ತು ದಾರಿಹೋಕರು ಸೇರಿದಂತೆ ಸುಮಾರು 100 ಜನ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು.
ಬೆಂಗಳೂರಿನಲ್ಲಿರುವ ಹಲವಾರು ಆಯುರ್ವೇದ ಕಾಲೇಜುಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜು, ನಿಯಮಿತವಾಗಿ ಮೃತದೇಹದ ಕೊರತೆಯನ್ನು ಎದುರಿಸುತ್ತಿವೆ. ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ (KIMS) ತನ್ನ ಮೊದಲ ವರ್ಷದಲ್ಲಿ ಮೃತದೇಹದ ಕೊರತೆಯನ್ನು ಅನುಭವಿಸಿದಾಗ ದೇಹವನ್ನು ಒದಗಿಸಿದ್ದು ಡಾ. ರಾಮಣ್ಣವರ್ ಟ್ರಸ್ಟ್. ಸರ್ಕಾರಿ ಕಾಲೇಜುಗಳು ಮೃತದೇಹಗಳ ಕೊರತೆಯನ್ನು ಹೇಗೋ ನಿಭಾಯಿಸಿಕೊಳ್ಳುತ್ತವೆ. ಆದರೆ, ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಮಾತ್ರ ಇದು ಸುಲಭವಲ್ಲ. ದೇಹದಾನದ ಸುತ್ತಲಿನ ವ್ಯಾಪಕ ತಪ್ಪು ಕಲ್ಪನೆಗಳಿಂದಾಗಿ ಇಂತಹ ಸಂಸ್ಥೆಗಳಿಗೆ ಮೃತದೇಹಗಳನ್ನು ಪಡೆಯುವುದು ಬಹಳ ಸವಾಲಿನ ಸಂಗತಿಯಾಗಿಬಿಟ್ಟಿದೆ, ಎನ್ನುತ್ತಾರೆ ಡಾ. ಮಹಾಂತೇಶ್ ರಾಮಣ್ಣವರ್.
ಈ ಹಿನ್ನೆಲೆಯಲ್ಲಿ, ಮೃತದೇಹದ ಹಸ್ತಾಂತರ ಮತ್ತು ಸ್ವೀಕಾರಕ್ಕಾಗಿ ವಿವರವಾದ ವ್ಯವಸ್ಥೆಯೊಂದನ್ನು ಅವರು ರೂಪಿಸಿದ್ದಾರೆ. ದೇಹದಾನಕ್ಕೆ ದಾನಿಯ ಜೊತೆಗೆ ಕುಟುಂಬದ ಎಲ್ಲಾ ಸದಸ್ಯರ ಲಿಖಿತ ಒಪ್ಪಿಗೆ ಹೊಂದುವುದು ಕಡ್ಡಾಯ. ಮುಂದೆ ದಾನಿಯ ಮರಣದ ನಂತರ, ಆತನ/ಆಕೆಯ ದೇಹವನ್ನು ಸ್ವೀಕರಿಸುವುದು ಮರಣ ಪ್ರಮಾಣಪತ್ರದ ಜೊತೆಗೆ. ಇಂತಹ ದೇಹಗಳನ್ನು ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸುವಾಗ ಔಪಚಾರಿಕ ಸಮಾರಂಭವೊಂದನ್ನು ನಡೆಸುವುದನ್ನು ಸಹ ಟ್ರಸ್ಟ್ ಮಾಡುತ್ತಾ ಬಂದಿದೆ.
ಕಾಲೇಜು ಮುಖ್ಯಸ್ಥ ಡಾ. ಸೀತಾರಾಮಯ್ಯ ಆರ್, ಕಾರ್ಯದರ್ಶಿ ಬಸವರಾಜೇಂದ್ರ, ಟ್ರಸ್ಟಿ ಗಳಾದ ನಾಗೇಶ್, ಕೋಟೇಶ್ವರ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಲಕ್ಷ್ಮೀ ಬಾಪು ಹುಲಕುಂಡ್ ಇದ್ದರು.
ವರದಿ :ಪ್ರಸನ್ನಕುಮಾರ್ ಬೆಂಗಳೂರು ✍🏻