
ಕಲಬುರ್ಗಿ ಜಿಲ್ಲೆ:
ಅಫಜಲಪೂರ: “ವಿದ್ಯಾರ್ಥಿ ವಸತಿ ನಿಲಯ” ಎಂದರೆ ಹಿಂದುಳಿದ ಪ್ರದೇಶಗಳ ಬಡ, ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ರಚಿಸಲಾದ ಆಶ್ರಯ. ಆದರೆ ಅಫಜಲಪೂರ ತಾಲೂಕಿನ ಬಂದರವಾಡ ಗ್ರಾಮದ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ವಾಸ್ತವಿಕತೆ ಮಾತ್ರ ಎಲ್ಲಿಗೂ ಕೂಡ ಸರಿಹೊಂದುತ್ತಿಲ್ಲ.

ಈ ವಸತಿ ನಿಲಯಕ್ಕೆ ಭೇಟಿ ನೀಡಿದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯದರ್ಶಿ ರಮೇಶ ಎಂ ಜಮಾದಾರ ಅವರು ವಿದ್ಯಾರ್ಥಿಗಳ ದಯನೀಯ ಸ್ಥಿತಿಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಿಲಯದ ಒಳಾಂಗಣದಲ್ಲಿ ಕಂಡ ಕೊಳಕು, ಅವ್ಯವಸ್ಥೆಯ ಬಗ್ಗೆ ಮಾತನಾಡಿದ ಅವರು, “ಹೊರಗಿನಿಂದ ನೋಡಿದರೆ ಇದು ಹೈಟೆಕ್ ಸಂಕಿರಣವಂತೆ ಕಾಣುತ್ತದೆ. ಆದರೆ ಒಳಗೆ ಹೋದರೆ ಶೌಚಾಲಯದ ಮುರಿದ ಬಾಗಿಲುಗಳು, ಹರಿದ ಹಾಸಿಗೆ, ಮುರಿದ ಮಂಚ, ನೀರಿಲ್ಲದ ಬಾಟಲಿಗಳು, ಪಾಚಿ ತುಂಬಿದ ಗೋಡೆಗಳು ಕಂಡುಬರುತ್ತವೆ. ವಿದ್ಯಾರ್ಥಿಗಳು ನೆಲದ ಮೇಲೆ ಮಲಗಬೇಕಾದ ಸ್ಥಿತಿಯಿದೆ,” ಎಂದು ಅಸಹನೆ ವ್ಯಕ್ತಪಡಿಸಿದರು.

ಅವರು ಮುಂದುವರೆದು, “ಮಕ್ಕಳಿಗೆ ಪೋಷಣೀಯ ಆಹಾರವಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಕ್ರಿಯಾಶೀಲವಿಲ್ಲ. ಶೌಚಾಲಯಗಳ ನವೀಕರಣವಿಲ್ಲದೇ ದುರ್ವಾಸನೆಯಿಂದ ವಿದ್ಯಾರ್ಥಿಗಳು ನರಳುತ್ತಿದ್ದಾರೆ. ಮಳೆಗಾಲ ಆರಂಭವಾಗಿದೆ ಆದರೆ ಬಿಸಿ ನೀರಿನ ವ್ಯವಸ್ಥೆಯಿಲ್ಲ. ಮಕ್ಕಳ ಆರೋಗ್ಯದ ಬಗ್ಗೆ ಯಾವ ದೃಷ್ಟಿಯೂ ಇಲ್ಲ,” ಎಂದು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದರು.
ಸಾಮಾನ್ಯ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಿರ್ವಹಿಸಬೇಕಾದ ಈ ವಸತಿ ನಿಲಯದ ಸ್ಥಿತಿ ಕಂಡು. “ಇದು ವಿದ್ಯಾರ್ಥಿಗಳಿಗೆ ಆಶ್ರಯವಲ್ಲ, ದನದ ಕೊಟ್ಟಿಗೆಯಂತಿದೆ,” ಎಂದು ಆತಂಕ ವ್ಯಕ್ತಪಡಿಸಿದ ಜಮಾದಾರ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಳ್ಳಬೇಕೆಂದು ಆಗ್ರಹಿಸಿದರು.
ಇಂತಹ ಅವ್ಯವಸ್ಥೆಯ ಮಧ್ಯೆ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಹೇಗೆ ನೇರವೇರಿಸಬಹುದು ಎಂಬುದು ಗಂಭೀರ ಪ್ರಶ್ನೆಯಾಗಿದೆ. ಅಧಿಕಾರಿಗಳು ಯಥಾಯೋಗ್ಯ ಕ್ರಮ ಕೈಗೊಂಡು ನಿಲಯದ ಪರಿಸ್ಥಿತಿಯನ್ನು ಸುಧಾರಿಸಬೇಕಾಗಿದೆ ಎಂಬ ಒತ್ತಾಯವನ್ನು ವ್ಯಕ್ತಪಡಿಸಿದರು.
ವರದಿ: ಕಾಡಸಿದ್ಧ ಎಸ್ ಕಟ್ಟಿಮನಿ