
ಹಾಸನ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಮೆರಿಕ ಪ್ರವಾಸಕ್ಕೆ ವಿದೇಶಾಂಗ ಸಚಿವಾಲಯ ಅನುಮತಿ ನಿರಾಕರಿಸಿರುವ ಕ್ರಮವನ್ನು ಹಾಸನದ ದಲಿತ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಇದು ಕೇಂದ್ರ ಸರ್ಕಾರದ ದಲಿತ ವಿರೋಧಿ ನೀತಿಯ ಸ್ಪಷ್ಟ ಪ್ರತಿಬಿಂಬವಾಗಿದೆ ಎಂಬುದಾಗಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕೀಲ ಬಿ.ಸಿ. ರಾಜೇಶ್ ಅವರು, “ಸಚಿವರು ವೈಯಕ್ತಿಕ ಉದ್ದೇಶದಿಂದ ಅಲ್ಲದೆ, ಬಂಡವಾಳ ಹೂಡಿಕೆ ಆಕರ್ಷಣೆ ಮತ್ತು ಅಭಿವೃದ್ಧಿ ಚರ್ಚೆಗಳಿಗಾಗಿ ಅಮೆರಿಕ ಪ್ರವಾಸಕ್ಕೆ ತೆರಳಲು ಉದ್ದೇಶಿಸಿದ್ದರು. ವಿಶ್ವದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸೆಮಿನಾರ್‌ಗಳಲ್ಲಿ ಭಾಗವಹಿಸಲು ಅವರು ಹೊರಟಿದ್ದರು. ಇದನ್ನು ನಿರಾಕರಿಸುವುದು ಕೇಂದ್ರದ ದುರುದ್ದೇಶಪೂರಿತ ನಡೆ” ಎಂದು ಆರೋಪಿಸಿದರು.
ಅವರು ಮುಂದುವರೆದು, “ಪ್ರಿಯಾಂಕ್ ಖರ್ಗೆ ಮೋಜುಮಸ್ತಿಗಾಗಿ ಅಲ್ಲ, ರಾಜ್ಯದ ಒಳಿತಿಗಾಗಿ ಅಮೆರಿಕಕ್ಕೆ ಹೋಗುತ್ತಿದ್ದವರು. ಆದರೆ ದಲಿತರು ಬೆಳೆಯಬಾರದು ಎಂಬ ಸಂಕುಚಿತ ಮನೋಭಾವನೆ ಬಿಜೆಪಿಯದು. ಪ್ರಧಾನಿ ಮೋದಿಗೆ ಮಾತ್ರ ವಿದೇಶ ಪ್ರವಾಸ ಮಾಡಲು ಅಧಿಕಾರವಿದೆಯಾ? ಹಿಂದುಳಿದ ವರ್ಗದವರು ತಮ್ಮ ಪಾಂಡಿತ್ಯ ಪ್ರದರ್ಶಿಸಬಾರದೇ?” ಎಂದು ಪ್ರಶ್ನಿಸಿದರು.
ಹಿರಿಯ ದಲಿತ ಮುಖಂಡ ಎಚ್.ಕೆ. ಸಂದೇಶ್ ಅವರು ಮಾತನಾಡುತ್ತಾ, “ದೇಶದಲ್ಲಿ ದಲಿತರು ವಿದೇಶಕ್ಕೆ ಹೋಗಬಾರದು ಎಂಬ ಕಾನೂನೇ ಇದೆಯಾ? ಪ್ರಧಾನಿ ಮೋದಿಯವರು ಲಕ್ಷಾಂತರ ರೂ. ವೆಚ್ಚದ ಸೂಟು ಬೂಟು ಧರಿಸಿ ನಿರಂತರ ವಿದೇಶ ಪ್ರವಾಸ ಮಾಡುತ್ತಿದ್ದಾರೆ. ಆದರೆ ಒಬ್ಬ ದಲಿತ ಸಚಿವನಿಗೆ ಮಾತ್ರ ನಿರಾಕರಣೆ? ಇದು ಅತ್ಯಂತ ಖಂಡನೀಯ” ಎಂದು ಕಿಡಿಕಾರಿದರು.
ಈ ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ಕೆರಗೋಡು ಎಂ. ಸೋಮಶೇಖರ್, ದೇವರಾಜ್, ಪರಮೇಶ್, ಪುಟ್ಟಯ್ಯ, ಹಾಗೂ ಮಾದಿಗ ದಂಡೋರ ಸಮಿತಿಯ ವಿಜಯಕುಮಾರ್ ಉಪಸ್ಥಿತರಿದ್ದರು.✍🏻
ವರದಿ: ಯೋಗೀಶ್ ಹಾಸನ