
ಬೆಂಗಳೂರು: ವಾಟರ್ ಟ್ಯಾಂಕರ್ ಬೈಕ್‌ಗೆ ಡಿಕ್ಕಿ ಹೊಡೆದು ಅಕ್ಕ ತಮ್ಮ-ಬಲಿಯಾಗಿರುವ ಘಟನೆ ನಗರದ ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ದೊಡ್ಡನಾಗಮಂಗಲದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ವೇಗವಾಗಿ ಬಂದ ವಾಟರ್ ಟ್ಯಾಂಕರ್, ಬೈಕ್‌ಗೆ ಡಿಕ್ಕಿಯಾದ್ದರಿಂದ ಕಾಲೇಜಿಗೆ ಹೊರಟಿದ್ದ ಅಕ್ಕ-ತಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ದೊಡ್ಡನಾಗಮಂಗಲದ ಕೆಂಪೇಗೌಡ ಬಡಾವಣೆ ನಿವಾಸಿಗಳಾದ ಮಧುಮಿತ (20) ಮತ್ತು ರಂಜನ್ (18) ಮೃತರು. ಬೆಂಗಳೂರಿನ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಮಧುಮಿತ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿನ ಮೊದಲ ದಿನ ಅಕ್ಕನನ್ನು ಬಿಟ್ಟು ಬರಲು ತಮ್ಮ ಹೋಗಿದ್ದ. ಈ ವೇಳೆ, ಕಿಲ್ಲರ್ ವಾಟರ್ ಟ್ಯಾಂಕರ್ ಇಬ್ಬರನ್ನೂ ಬಲಿ ಪಡೆದಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೈಕ್ ಮಿರರ್‌ಗೆ ವೇಗವಾಗಿ ಬಂದ ವಾಟರ್ ಟ್ಯಾಂಕರ್ ಡಿಕ್ಕಿಯಾದುದರಿಂದ ಅಕ್ಕ-ತಮ್ಮ ಕೆಳಗೆ ಬಿದ್ದು, ಅವರ ತಲೆ ಮೇಲೆ ಟ್ಯಾಂಕರ್ ಹಿಂಬದಿ ಚಕ್ರ ಹರಿದು ದುರಂತ ಸಂಭವಿಸಿದೆ.
ವಾಟರ್ ಟ್ಯಾಂಕರ್ ಚಾಲಕನ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.