
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನಂದಿ ಮೋರಿ ಬಳಿ 24 ವರ್ಷದ ಯುವಕನೊಬ್ಬ ನೇಣಿಗೆ ಶರಣಾದ ದುಃಖದ ಘಟನೆ ಇಂದು ನಡೆದಿದೆ. ಕೊನಘಟ್ಟ ಗ್ರಾಮದ ನಿವಾಸಿ ರಕ್ಷಿತ್ ಬಾಬು (24) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ಯುವಕ ಫುಡ್ ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಇತ್ತೀಚೆಗೆ ತಾಯಿ ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ. ಇವರ ತಾಯಿ ಚಂದ್ರಿಕಾ ಕಳೆದ ಒಂದೂವರೆ ತಿಂಗಳ ಹಿಂದೆ ಸಾಲಬಾಧೆಯಿಂದ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದರು. ತಾಯಿಯನ್ನು ಕಳೆದುಕೊಂಡ ದುಃಖವನ್ನು ಸಹಿಸಲಾರದೆ, ಮನೋನೊಂದ ಯುವಕ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ.
ಈ ಘಟನೆ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕುಟುಂಬ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದುದರಿಂದ ಈ ದುರ್ಘಟನೆ ನಡೆದಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಸಮಾಜದಲ್ಲಿ ಇಂತಹ ಆತ್ಮಹತ್ಯೆ ಪ್ರಕರಣಗಳು ಮರುಕಳಿಸದಂತೆ ಮಾನಸಿಕ ಆರೋಗ್ಯದ ಕುರಿತು ಹೆಚ್ಚಿನ ಜಾಗೃತಿಯನ್ನು ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.