
ಬೆಂಗಳೂರು:
ಆರ್‌ಸಿಬಿ ವಿಜಯ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಬಿ. ದಯಾನಂದ್ ಅವರನ್ನು ಅಮಾನತುಗೊಳಿಸಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸರ್ಕಾರದ ನಿರ್ಧಾರವನ್ನೂ ಹಾಗೂ ಪೊಲೀಸರ ನಿರ್ವಹಣೆಯನ್ನೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟೀಕಿಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನೀಡಿದ ಒಂದು ಸಂದರ್ಶನದಲ್ಲಿ ದಯಾನಂದ್ ಅವರು ತಮ್ಮ ಸೇವಾ ನಿಷ್ಠೆಯ ಬಗ್ಗೆ ಮನ ಮುಟ್ಟುವ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
“ನಾನು ಕಳೆದ 35 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಈ ಅವಧಿಯಲ್ಲಿ ಒಂದೇ ಒಂದು ದಿನವೂ ರಜೆ ಹಾಕಿಲ್ಲ. ನನ್ನ ಮಕ್ಕಳ ನಾಮಕರಣ ಕಾರ್ಯಕ್ರಮಕ್ಕೂ ನಾನು ಹಾಜರಾಗಿಲ್ಲ. ಕರ್ತವ್ಯವೇ ನನ್ನ ಮೊದಲ ಆದ್ಯತೆ.” ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಪೊಲೀಸ್ ಅಧಿಕಾರಿಯಾಗಿ ದಯಾನಂದ್ ಅವರು ತೀವ್ರ ಶಿಸ್ತು ಮತ್ತು ಜವಾಬ್ದಾರಿಯನ್ನೂ ಪಾಲಿಸುತ್ತಿದ್ದರು ಎಂಬುದು ಸಹಸ್ರಾರು ಸಹೋದ್ಯೋಗಿಗಳಿಂದಲೂ ಸ್ವೀಕೃತವಾಗಿದೆ. ಇಂತಹ ನಿಷ್ಠಾವಂತ ಅಧಿಕಾರಿಯ ವಿರುದ್ಧ ಈ ರೀತಿಯ ಕ್ರಮವನ್ನು ಕೆಲವರು ಅನ್ಯಾಯದ ನಿರ್ಧಾರವೆಂದು ತಿಳಿಸಿದ್ದಾರೆ.
ಇನ್ನೊಂದೆಡೆ, ಸರ್ಕಾರದ ನಿರ್ಧಾರವನ್ನು ಸಮರ್ಥಿಸುತ್ತಿರುವವರು, ಸಾರ್ವಜನಿಕ ಸುರಕ್ಷತೆ ಮುಖ್ಯ ಎಂಬ ತತ್ವವನ್ನು ಹೇಳುತ್ತಿದ್ದಾರೆ. ದುರಂತ ಸಂಭವಿಸಿದ್ದೆ ನಿರ್ವಹಣಾ ತಪ್ಪಿನ ಫಲವಾಗಿದೆ ಎಂದು ಅವರು ಹೇಳುತ್ತಿದ್ದಾರೆ.
ಈ ನಿಟ್ಟಿನಲ್ಲಿ, ದಯಾನಂದ್ ಅವರ 35 ವರ್ಷಗಳ ಸೇವಾ ಜೀವನ ಮತ್ತು ಅವರಿಂದ ತ್ಯಾಗಮಯ ಕಾರ್ಯವೈಖರಿಯು ಪೊಲೀಸ್ ಇಲಾಖೆಯ ಇತರ ಅಧಿಕಾರಿಗಳಿಗೆ ಪ್ರೇರಣೆಯಾಗಲಿ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.