
ತುರುವೇಕೆರೆ, ಜುಲೈ 31:
ತಾಲೂಕಿನ ದಂಡಿನ ಶಿವರ ಹೋಬಳಿ ವ್ಯಾಪ್ತಿಯ ಬ್ಯಾಡರಹಳ್ಳ ಕಾವಲ್ ಗ್ರಾಮದಲ್ಲಿ ದಲಿತರಿಗೆ ಮಂಜೂರಾದ ಜಮೀನಿನಲ್ಲಿ ಸವರ್ಣಿಯೊಬ್ಬರಿಂದ ನಿರಂತರವಾಗಿ ಅತಿಕ್ರಮಣದ ಯತ್ನ ನಡೆಯುತ್ತಿದ್ದು, ಈ ಬಗ್ಗೆ ಸ್ಥಳೀಯ ದಲಿತ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದವು. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ತಾಲೂಕು ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನು ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್) ನೀಡಿದೆ.

ಸ್ಥಳೀಯರ ಪ್ರಕಾರ, ಬ್ಯಾಡರಹಳ್ಳ ಕಾವಲ್ ಗ್ರಾಮ ವ್ಯಾಪ್ತಿಯ ಸರ್ವೆ ನಂ. 3/15ರಲ್ಲಿ ಅಂದರೆ ಸುಮಾರು 1973ರಲ್ಲಿ ಹನುಮಯ್ಯ ಬಿನ್ ನರಸಯ್ಯ ಎಂಬ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗೆ ನಾಲ್ಕು ಎಕರೆ ಜಮೀನು ಮಂಜೂರಾಗಿತ್ತು. ಈ ಜಮೀನಿನಲ್ಲಿ ಅವರ ಕುಟುಂಬಸ್ಥರು ಉಳುಮೆ ಕಾರ್ಯ ಮಾಡಲು ಮುಂದಾದಾಗ, ಪ್ರತೀ ಬಾರಿಯೂ ರಾಜಶೇಖರ್ ಬಿನ್ ಪುಟ್ಟಯ್ಯ ಎಂಬ ಸವರ್ಣ ವ್ಯಕ್ತಿ ಅಡ್ಡಿಪಡಿಸುತ್ತಿದ್ದಾನೆ ಎಂಬ ಆರೋಪ ಹೊರಸಲಾಗಿದೆ.

“ಈ ಜಮೀನನ್ನು ನಾನು ಕೊಂಡುಕೊಂಡಿದ್ದೇನೆ, ಇದು ನನ್ನದ್ದು” ಎಂದು ಹೇಳಿ ಉಳುಮೆ ಸಮಯದಲ್ಲಿ ಟ್ರ್ಯಾಕ್ಟರ್ ಮುಂಭಾಗ ಮಲಗಿ, ಕೆಲಸಕ್ಕೆ ಅಡ್ಡಿಯಾಗುವ ಕೆಲಸವನ್ನೇ ಮಾಡುತ್ತಿದ್ದಾನೆ. ಈ ಮೂಲಕ ದಲಿತರಿಗೆ ಜಮೀನಿನಲ್ಲಿ ಶ್ರಮಿಸಲು ತೀವ್ರ ತೊಂದರೆಯನ್ನು ಈಡಾಗಿಸುತ್ತಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್ ಠಾಣೆ ಹಾಗೂ ತಹಶೀಲ್ದಾರ್ ಕಚೇರಿಗೆ ದೂರು ನೀಡಲಾಗಿದೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕರಾದ ದಂಡಿನ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಜಮೀನಿನ ಬಳಿ ಪತ್ರಿಕಾಗೋಷ್ಠಿ ನಡೆಸಿದರು. ಅವರು ಮಾತನಾಡುತ್ತಾ, “ಈ ಜಮೀನಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಹನುಮಯ್ಯ ಬಿನ್ ನರಸಯ್ಯ ಅವರ ಹೆಸರಲ್ಲಿ ಸ್ಪಷ್ಟವಾಗಿ ಲಭ್ಯವಿದ್ದು, ಸರ್ಕಾರದ ಎಲ್ಲ ದಾಖಲೆಗಳೂ ಈ ವಿಷಯವನ್ನು ದೃಢಪಡಿಸುತ್ತವೆ. ಆದರೂ ಯಾವುದೇ ಹಕ್ಕುಪತ್ರವಿಲ್ಲದ ಈ ವ್ಯಕ್ತಿ ದಲಿತರಿಗೆ ಜಮೀನು ದೊರಕಬಾರದೆಂದು ಹಿಂಸೆ, ಅಡ್ಡಿಪಡಿಕೆ, ಧಮಕಿ ನೀಡುತ್ತಿರುವುದು ಖಂಡನೀಯ,” ಎಂದು ಹೇಳಿದರು.
ಇದೀಗ ಕೂಡಲೇ ಪ್ರಾದೇಶಿಕ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಈತನ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ತುರುವೇಕೆರೆ ತಾಲೂಕು ಕಚೇರಿ ಮುಂದೆ ಭಾರೀ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಈ ಹೋರಾಟಕ್ಕೆ ಸ್ಥಳೀಯ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳು ಬೆಂಬಲ ನೀಡಲಿದ್ದು, ನ್ಯಾಯಕ್ಕಾಗಿ ಹೋರಾಟ ಮುಂದುವರೆಯುತ್ತದೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಪ್ರೊಫೆಸರ್ ಬಿ. ಕೃಷ್ಣಪ್ಪ ಸ್ಥಾಪಿತ 47-74/75(ರಿ) ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು, ಜಮೀನಿನ ಮಾಲೀಕರಾದ ಕುಟುಂಬಸ್ಥರು ಮತ್ತು ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ಕೆ.ಎ., ತುರುವೇಕೆರೆ
ಸತೀಶ್ ಮುಂಚೆಮನೆ ಸಾರಥ್ಯದಲ್ಲಿ… ಬಿಗ್ ಲೈವ್ ಸುದ್ದಿ ಕ್ಷಣ ಕ್ಷಣದ ಸುದ್ದಿ ಇನ್ನಷ್ಟು ಸುದ್ದಿ ಓದಲು ಸಾತ್ವಿಕ ನುಡಿ ಮಾಸಪತ್ರಿಕೆಯ web new spage ನೋಡಿ. ಸುದ್ದಿ ಜಾಹಿರಾತುಗಳಿಗಾಗಿ ಕರೆಮಾಡಿ.
9845905838.ವಿಜಯ್ ಮುನಿಯಪ್ಪ
ಕ್ರೈಂ ವರದಿಗಾರರು