
ಅನಂದಪುರ, ರಮೇಶ್ ಡಿ.ಜಿ ವರದಿ:
ಕರ್ನಾಟಕದ ಅತ್ಯಂತ ಪ್ರಮುಖ ಹಾಗೂ ತಾಂತ್ರಿಕವಾಗಿ ಪ್ರಗತಿಶೀಲ ಸೇತುವೆಗಳಲ್ಲಿ ಒಂದಾದ ಶ್ರೀ ಸಿಗಂದೂರು ಚೌಡೇಶ್ವರಿ ಸೇತುವೆ ಉದ್ಘಾಟನಾ ಸಮಾರಂಭವು ಈ ತಿಂಗಳ ಜುಲೈ 14, ಸೋಮವಾರ ಬೆಳಿಗ್ಗೆ ನಡೆಯಲಿದೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರತ್ನಾಕರ್ ಮನಗೋಡು ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಈ ಸೇತುವೆ ಕರ್ನಾಟಕದ ಅತಿ ದೊಡ್ಡ ಕೇಬಲ್ ನೆಟ್ವರ್ಕ್ ಸೇತುವೆ ಆಗಿದ್ದು, ತಾಂತ್ರಿಕ ದೃಷ್ಟಿಯಿಂದ ಹಾಗೂ ಪ್ರವಾಸೋದ್ಯಮ ವೃದ್ಧಿಗೆ ಸಹಾಯಕವಾಗಲಿರುವ ಮಹತ್ವದ ಮೂಲಸೌಕರ್ಯವಾಗಲಿದೆ. ಉದ್ಘಾಟನಾ ಸಮಾರಂಭವು ನಿಜಕ್ಕೂ ಐತಿಹಾಸಿಕವಾಗಿದ್ದು, ರಾಜ್ಯ ಹಾಗೂ ಕೇಂದ್ರ ರಾಜಕಾರಣದಲ್ಲಿ ಹೆಸರು ಮಾಡಿರುವ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಕಡಗೇರಿ, ಸಂಸದ ಬಿ.ವೈ. ರಾಘವೇಂದ್ರ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಹಾಗೂ ರಾಜ್ಯದ ಹಲವು ಬಿಜೆಪಿ ಶಾಸಕರು ಮತ್ತು ಗಣ್ಯ ನಾಯಕರು ಭಾಗವಹಿಸಲಿದ್ದಾರೆ.
ಸೇತುವೆ ನಿರ್ಮಾಣ ಕಾರ್ಯದ ಕೊನೆಯ ಹಂತ ತಲುಪುವಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ಸಂಸದ ರಾಘವೇಂದ್ರ ಅವರು ನಿರಂತರ ಶ್ರಮ ಪಟ್ಟಿದ್ದಾರೆ. ಇದಲ್ಲದೆ ಬಿಜೆಪಿ ಹಿರಿಯ ಮುಖಂಡರಾದ ಹರತಾಳ ಹಾಲಪ್ಪ,ಹಾಗೂ ಬಿ ಜೆ ಪಿ ಮುಖಂಡರುಗಳು ಮತ್ತು ಕಾಂಗ್ರೆಸ್ ನಾಯಕರಾದ ಕಾಗೋಡು ತಿಮ್ಮಪ್ಪಜಿಯವರ ಸಹಕಾರವೂ ಪ್ರಮುಖವಾಗಿದೆ ಎಂದು ರತ್ನಾಕರ್ ಮನಗೋಡು ಅವರು ನೇರವಾಗಿ ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದ ನಂತರ ಸಾಗರದ ನೆಹರು ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ. ಈ ಸಭೆಗೆ ರಾಜ್ಯದೆಲ್ಲೆಡೆಂದೂ ಗಣ್ಯ ಅತಿಥಿಗಳು ಆಗಮಿಸಲಿದ್ದು, ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಸೇರಲಿದ್ದಾರೆ ಎಂಬ ನಿರೀಕ್ಷೆಯಿದೆ.
ಈ ಸಭೆ ಹಾಗೂ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಅನಂತ ಘಟಕದ ಬಿಜೆಪಿ ಅಧ್ಯಕ್ಷ ಶಾಂತಪ್ಪ ಗೌಡ, ಗ್ರಾಮ ಪಂಚಾಯತಿ ಅಧ್ಯಕ್ಷ ಗುರುರಾಜ ಕೆ, ಮಾಜಿ ಅಧ್ಯಕ್ಷ ಮೋಹನ್ ಮಂಜಪ್ಪ, ಹಾಗೂ ಅನೇಕ ಬಿಜೆಪಿ ಕಾರ್ಯಕರ್ತರು ಸಕ್ರಿಯ ಭಾಗವಹಿಸಿದ್ದಾರೆ.
ಈ ಕಾರ್ಯಕ್ರಮವು ನಾಡಿನ ಅಭಿವೃದ್ಧಿಗೆ ಹಾಗೂ ದೇವಸ್ಥಾನ ಪ್ರವಾಸೋದ್ಯಮಕ್ಕೆ ಹೊಸ ದಾರಿ ತೆರೆದು ಕೊಡಲಿದ್ದು, ಸಾರ್ವಜನಿಕರ ಭಾಗವಹಿಸುವಿಕೆಯಿಂದ ಮತ್ತಷ್ಟು ವೈಭವ ಪಡೆಯಲಿದೆ.