
ತುಮಕೂರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಣಿತ ಮತ್ತು ವಿಜ್ಞಾನ ವಿಭಾಗದ ಸಂಯೋಜನೆಯೊಂದಿಗೆ ತುಮಕೂರು ವಿಶ್ವವಿದ್ಯಾಲಯ ಮಟ್ಟದ ಒಂದು ದಿನದ ಜಾಮ್ ಮತ್ತು ಐ.ಬಿ.ಪಿ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಕಾರ್ಯಗಾರವನ್ನು ಆಯೋಜಿಸಲಾಯಿತು.

ಗಿಡಕ್ಕೆ ನೀರು ಬಿಡುವ ಮೂಲಕ ಕಾರ್ಯಗಾರವನ್ನು ಉದ್ಘಾಟಿಸಿದ ತುಮಕೂರು ವಿಶ್ವವಿದ್ಯಾಲಯದ ಪರೀಕ್ಷಾಂಗದ ಉಪ ಕುಲಸಚಿವರಾದ ಡಾ. ನರಹರಿ ಎನ್. ಅವರು, ಸರ್ಕಾರಿ ಉದ್ಯೋಗಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಅವಶ್ಯಕತೆಯನ್ನು ವಿವರಿಸಿದರು. ಉದ್ಯೋಗಾರ್ಥಿಗಳ ಸಂಖ್ಯಾ ಹೆಚ್ಚಳದಿಂದ ಸ್ಪರ್ಧಾತ್ಮಕತೆ ಹೆಚ್ಚಿದ ಕಾರಣ, ವಿದ್ಯಾರ್ಥಿಗಳು ಗುರಿಯ ಕಡೆ ಕಠಿಣ ಪರಿಶ್ರಮಪಡುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಶ್ರೀಮತಿ ವಸಂತ ಟಿ.ಡಿ. ಅವರು, ನಿರಂತರ ಅಧ್ಯಯನ ಮತ್ತು ಯೋಜಿತ ಪಾಠಕ್ರಮದ ಮೂಲಕ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬಹುದೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಸಂಯೋಜಕರಾದ ಡಾ. ಯೋಗಿಶ್ ಎನ್. ಮಾತನಾಡಿ, ಈ ತರಬೇತಿ ಕಾರ್ಯಗಾರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಹಾಯಕವಾಗಲಿದೆ ಎಂದು ತಿಳಿಸಿದರು. ಡಾ. ನರಹರಿ ಎನ್. ಅವರು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪ್ರೊ. ರಜತ್ ಗಿರಿ ಡಿ.ಟಿ. ಸ್ವಾಗತಿಸಿದರು, ಶ್ರೀಮತಿ ವಿಜಯಲಕ್ಷ್ಮೀ ಬಿ.ಎನ್. ನಿರೂಪಿಸಿದರು, ಹಾಗೂ ಸಿದ್ಧಲಿಂಗಸ್ವಾಮಿ ಆರ್. ವಂದಿಸಿದರು. ವಿವಿಧ ಕಾಲೇಜುಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿದರು. ಡಾ. ನರಹರಿ ಎನ್. ಹಾಗೂ ಶ್ರೀಮತಿ ವಸಂತ ಟಿ.ಡಿ. ಅವರನ್ನು ಗಣಿತ ಮತ್ತು ವಿಜ್ಞಾನ ವಿಭಾಗದ ಪರವಾಗಿ ಸನ್ಮಾನಿಸಲಾಯಿತು.