
ಉಡುಪಿ: ಬಿಜೆಪಿ ಪಕ್ಷದ ಸುಳ್ಳು ಆಧಾರಿತ ಆರೋಪಗಳ ವಿರುದ್ಧ ಕಾಂಗ್ರೆಸ್ ಪಕ್ಷದವರು ಸತ್ಯದರ್ಶನ ಶೀರ್ಷಿಕೆಯಲ್ಲಿ ಮಂಗಳವಾರ (15/07/2025) ಉಡುಪಿಯ ವಿವಿಧ ಗ್ರಾಮ ಪಂಚಾಯತ್‌ಗಳ ಮುಂಭಾಗದಲ್ಲಿ ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಂಡರು. ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಈ ಕಾರ್ಯಕ್ರಮ ಬೆಳಿಗ್ಗೆ 10:30ಕ್ಕೆ ಕಡೆಕಾರ್ ಗ್ರಾಮ ಪಂಚಾಯತ್‌ನಲ್ಲಿ ಪ್ರಾರಂಭವಾಗಿ, 11:30ಕ್ಕೆ ಬಡಾನಿಡಿಯೂರು ಮತ್ತು 2:30ಕ್ಕೆ ತೆಂಕನಿಡಿಯೂರಿನಲ್ಲಿ ಜರುಗಿತು.
9/11 ಮನೆ ನಿರ್ಮಾಣ ಯೋಜನೆಯ ಸಮಸ್ಯೆ, ಅಕ್ರಮ ಸಕ್ರಮದ 53 ಮತ್ತು 51 ಅರ್ಜಿ ತಿರಸ್ಕಾರ, ವೃಧ್ಯಾಪ್ಯ ವೇತನ ಹಾಗೂ ಸಂಧ್ಯಾ ಸುರಕ್ಷಾ ಯೋಜನೆಯ ರದ್ದತಿ ಮತ್ತು ವಿದ್ಯುತ್ ದರ ಏರಿಕೆ ಇತ್ಯಾದಿ ವಿಚಾರಗಳನ್ನು ರಾಜಕೀಯ ಕಲಾಪಗಳಾಗಿ ಬಳಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮಾಡುತ್ತಿರುವ ತಪ್ಪು ಪ್ರಚಾರಕ್ಕೆ ಪ್ರತಿಯಾಗಿ ಈ ಸತ್ಯದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಉಡುಪಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, “ಪ್ರಜ್ಞಾವಂತ ಜಿಲ್ಲೆಯಲ್ಲಿ ಪ್ರಜ್ಞಾಹೀನ ಶಾಸಕರು ಆಯ್ಕೆಯಾದ ದುಃಖಕರ ಸ್ಥಿತಿ ಎದುರಾಗಿದ್ದು, ಜನರ ಸಮಸ್ಯೆ ಬಗೆಹರಿಸುವ ಬದಲು ಕೋಳಿ ಅಂಕಕ್ಕೆ ಅವಕಾಶ ಕೇಳುವ ಶಾಸಕರು ಜನರ ನಂಬಿಕೆಗೆ ತಕ್ಕ ಪ್ರತಿಫಲ ನೀಡಿಲ್ಲ,” ಎಂದು ಹೇಳಿದ್ದಾರೆ.
“ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಂಡಿದ್ದು, ಪಂಚ ಗ್ಯಾರಂಟಿಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತಂದಿದೆ. ಬಿಜೆಪಿ ಸುಳ್ಳುಗಳ ವಿರುದ್ಧ ಜನರಿಗೆ ಸತ್ಯವನ್ನು ಹೇಳುವ ನಮ್ಮ ಕರ್ತವ್ಯ” ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಹರೀಶ್ ಕಿಣಿ, ಯತೀಶ್ ಕರ್ಕೇರ, ಸುರೇಶ್ ಶೆಟ್ಟಿ, ಯುವರಾಜ್, ಧನಂಜಯ ಕುಂದರ್ ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ:✍🏻 ರಾಜೇಶ್ ಉಡುಪಿ