
ಬೆಂಗಳೂರು ನಗರದ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬ್ಯಾಡ್ಮಿಂಟನ್ ತರಬೇತುದಾರನನ್ನು ಬಂಧಿಸಲಾಗಿದೆ. ತಮಿಳುನಾಡು ಮೂಲದ 30 ವರ್ಷದ ಈ ಆರೋಪಿಯನ್ನು ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಸ್ಎಸ್ಎಲ್‌ಸಿ ಪರೀಕ್ಷೆಯ ಬಳಿಕ ರಜೆಗೆ ಅಜ್ಜಿಯ ಮನೆಗೆ ಹೋಗಿದ್ದ ಬಾಲಕಿ, ಅಜ್ಜಿಗೆ ಅಪರಿಚಿತ ನಂಬರ್‌ನಿಂದ ಬಂದ ಬೆತ್ತಲೆ ಫೋಟೋ ನೋಡಿ ಶಂಕೆ ಹುಟ್ಟಿಸಿದ್ದಳು. ತಕ್ಷಣ ಪೋಷಕರಿಗೆ ಮಾಹಿತಿ ನೀಡಿದ ಅಜ್ಜಿ, ಬಳಿಕ ಬಾಲಕಿಯ ತಾಯಿ ಮಗಳನ್ನು ಪ್ರಶ್ನಿಸಿದಾಗ ಸಾಕಷ್ಟು ಬಾರಿ ಕೋಚ್ ಲೈಂಗಿಕ ದೌರ್ಜನ್ಯ ಎಸಗಿದ್ದನ್ನು ಒಪ್ಪಿಕೊಂಡಿದ್ದಾಳೆ.
ಆರೋಪಿ ಕೋಚ್‌ನು ಬಾಲಕಿ ಡ್ಯಾನ್ಸ್ ಕ್ಲಾಸ್ ಅಥವಾ ಟ್ಯೂಷನ್ ಗೆ ಹೋಗುವ ಸಮಯದಲ್ಲಿ ಭೇಟಿಯಾಗಿ ತನ್ನ ಮನೆಗೆ ಕರೆದೊಯ್ಯುತ್ತಿದ್ದ. ಅಲ್ಲಿ ಅತ್ಯಾಚಾರ ಎಸಗಿ, ಆ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದನು. ತನಿಖೆಯ ವೇಳೆ ಆತನ ಫೋನ್‌ನಲ್ಲಿ ಸಂತ್ರಸ್ತೆಯ ಫೋಟೋವೊಂದಿಗೇ ಇನ್ನೂ 7-8 ಬಾಲಕಿಯರ ಬೆತ್ತಲೆ ಚಿತ್ರಗಳು ಹಾಗೂ ವಿಡಿಯೋಗಳು ಪತ್ತೆಯಾಗಿದೆ.
ಈ ಘಟನೆ ಬಹಿರಂಗವಾದ ನಂತರ ಬಾಲಕಿಯ ತಾಯಿ ಹುಳಿಮಾವು ಠಾಣೆಗೆ ದೂರು ನೀಡಿದರು. ಆರೋಪಿಯನ್ನು ನ್ಯಾಯಾಂಗಕ್ಕೆ ಹಾಜರು ಪಡಿಸಿದ ಪೊಲೀಸರು 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ಮುಂದಿನ ತನಿಖೆ ಮುಂದುವರೆಸಿದ್ದಾರೆ. ಮತ್ತಷ್ಟು ಸತ್ಯಾಂಶಗಳು ಬೆಳಕಿಗೆ ಬರಲಿದ್ದು, ಆರೋಪಿಯ ಸಾಮಾಜಿಕ ವಲಯವನ್ನು ಕೂಡ ಪರಿಶೀಲನೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.