
ಸಾತ್ವಿಕ ನುಡಿ ಪತ್ರಿಕೆ – ವರದಿ: ರಮೇಶ್ ಡಿಜಿ, ಆನಂದಪುರ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ನಿರ್ಮಾಣವಾಗುತ್ತಿರುವ ಬಹು ನಿರೀಕ್ಷಿತ ಶ್ರೀ ಸಿಗಂದೂರು ಚೌಡೇಶ್ವರಿ ಅಂಬರಗೋಡ್ಲು ಸೇತುವೆಯ ಶಿಲಾನ್ಯಾಸ ಕಾರ್ಯಕ್ರಮವು ಭಾನುವಾರ ಭಕ್ತಿಭಾವದೊಂದಿಗೆ ಜರುಗಿತು. ಭಾರತದಲ್ಲಿ ಅತಿ ದೊಡ್ಡ ಕೇಬಲ್ ನೆಟ್ವರ್ಕ್ ತಂತ್ರಜ್ಞಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸೇತುವೆ ಪ್ರಾದೇಶಿಕ ಅಭಿವೃದ್ಧಿಗೆ ದಾರಿ ಮಾಡಿಕೊಡುವ ಮಹತ್ವದ ಯೋಜನೆಯಾಗಿದೆ.
ಈ ಸಂದರ್ಭ ಮಾಜಿ ವಿಧಾನ ಪರಿಷತ್ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಅವರು ಭಾವೋದ್ರೇಕದಿಂದ ಮಾತನಾಡುತ್ತಾ, ತಮ್ಮ ದೀರ್ಘಕಾಲದ ಕನಸು ನನಸಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. “ನಾನು ಶಾಸಕರಾಗಿದ್ದಾಗಲೇ ಸಿಗಂದೂರು ಹಾಗೂ ಸುತ್ತಮುತ್ತಲಿನ ಜಾಗಗಳು ಮುಳುಗಡೆಯಾಗುತ್ತಿದ್ದು, ಈ ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರದ ಗಮನ ಸೆಳೆಯಲು ಹಲವಾರು ಹೋರಾಟಗಳನ್ನು ಕಾಂಗ್ರೆಸ್ ಪಕ್ಷದ ಮುಖಂಡತ್ವದಲ್ಲಿ ಮಾಡಿದ್ದೆವು. ಆಗಿನ ಅಧಿಕಾರದಲ್ಲೇ ಸೇತುವೆ ನಿರ್ಮಾಣಕ್ಕೆ ಅಗತ್ಯ ಹಣವನ್ನು ಮಂಜೂರು ಮಾಡಿದ್ದೆವು. ಈಗ ಅದು ನಿಜವಾಗುತ್ತಿರುವುದು ನನಗೆ ತುಂಬಾ ಸಂತೋಷ,” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಗರ ಕ್ಷೇತ್ರದ ಪ್ರಸ್ತುತ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, 2008ರಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ನೀಡಿದ ಮನವಿ ಪತ್ರದ ನೆನಪನ್ನು ಹಂಚಿಕೊಂಡರು. ಅವರು ಪಾದಯಾತ್ರೆ ಮೂಲಕ ಜನಬಲ ಸೃಷ್ಟಿಸಿ ಈ ಬೇಡಿಕೆಗೆ ಒತ್ತಾಯ ಮಾಡಿದ ಘಟನೆಯು ಈಗ ಫಲ ನೀಡಿರುವುದಾಗಿ ಅವರು ಹೇಳಿದರು. “ಈ ಯೋಜನೆಯ ಯಶಸ್ಸಿಗೆ ನಾನೂ ಭಾಗಿಯಾಗಿರುವುದರಲ್ಲಿ ಹೆಮ್ಮೆಪಡುವೆ,” ಎಂದರು.
ಕಾಗೋಡು ತಿಮ್ಮಪ್ಪ ಅವರು, “ಈ ಸೇತುವೆ ನಿರ್ಮಾಣದ ಹಿಂದೆ ಸಾಗರ ತಾಲೂಕಿನ ಹಲವಾರು ಕಾಂಗ್ರೆಸ್ ಮುಖಂಡರ ಶ್ರಮವಿದೆ. ಅವರ ತ್ಯಾಗ, ಪರಿಶ್ರಮದ ಫಲವಾಗಿ ಇಂದು ಈ ಹಂತಕ್ಕೆ ಬಂದಿರುವುದು ಒಂದು ಐತಿಹಾಸಿಕ ಕ್ಷಣ,” ಎಂದು ಗೌರವದ ನುಡಿಗಳು ಹರಿಸಿದರು.
ಈ ಸೇತುವೆ ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಇದು ಸ್ಥಳೀಯರ ಸಂಚಾರ, ವ್ಯವಹಾರ ಹಾಗೂ ಪ್ರವಾಸೋದ್ಯಮಕ್ಕೆ ಹೊಸ ಉಜ್ವಲ ಭವಿಷ್ಯ ನಿರ್ಮಿಸಲು ಸಹಕಾರಿಯಾಗಲಿದೆ.✍🏻