
ಆಲೂರು: ದೇಹಶ್ರಮ ವಹಿಸುವದರೊಂದಿಗೆ ಮನುಷ್ಯ ತನ್ನ ಜೀವನ ಶೈಲಿ ಬದಲಾವಣೆ ಮಾಡಿಕೊಂಡು, ಮಾರಣಾಂತಿಕ ರೋಗಕ್ಕೆ ತುತ್ತಾಗುವುದನ್ನು ತಡೆಯಬಹುದು ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.
ಪಟ್ಟಣದ ಮಿನಿ ವಿದಾನಸೌಧ ಮುಂಭಾಗದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಆಸ್ಪತ್ರೆ ಮತ್ತು ವಿವಿಧ ಇಲಾಖೆಗಳು ಮತ್ತು ಸಂಘಟನೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ವಾಕಥಾನ್-2025 ಕಾಲ್ನಡಿಗೆ ಜಾಥ ಕಾರ್ಯಕ್ರಮವನ್ನು, ಹಸಿರು ಬಾವುಟ ತೋರಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿ, ಮಾರಣಾಂತಿಕ ಕಾಯಿಲೆಗಳಾದ ಹೃದಯಾಘಾತ ತಡೆಯಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಾಥಾ ನಡೆಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೂ ಈ ಬಗ್ಗೆ ಅರಿವು ಮೂಡಿಸಲು ಎಲ್ಲರೂ ಸಹಕರಿಸಬೇಕು ಎಂದರು
ತಾ. ಆರೋಗ್ಯಾಧಿಕಾರಿ ಡಾ. ನಿಸಾರ್ ಫಾತಿಮ ಮಾತನಾಡಿ, ಇತ್ತೀಚೆಗೆ ಕಡಿಮೆ ವಯಸ್ಸಿನಲ್ಲಿ ಹೃದಯಾಘಾತವಾಗುತ್ತಿದೆ. ಕೊಬ್ಬಿನಾಂಶ ಪದಾರ್ಥಗಳನ್ನು ಇತಿಮಿತಿಯಲ್ಲಿ ಸೇವಿಸಬೇಕು. ಮಾದಕ ವಸ್ತುಗಳ ಸೇವನೆಯಿಂದ ದೂರವಿರಬೇಕು. ಆಹಾರ ಮಳಿಗೆ(ಫುಡ್ ಕೋರ್ಟ್)ಗಳಲ್ಲಿ ದೊರಕುವ ಆಹಾರ ಬಹುತೇಕ ರಾಸಾಯನಿಕ ಮಿಶ್ರಿತದಿಂದ ಕೂಡಿರುತ್ತದೆ. ಮನೆಯಲ್ಲಿ ತಯಾರಿಸುವ ಆಹಾರವನ್ನು ಬಳಸಬೇಕು. ನಿತ್ಯ ವ್ಯಾಯಾಮ ಮತ್ತು ಕನಿಷ್ಠ 8 ಗಂಟೆ ನಿದ್ರೆ ಮಾಡಬೇಕು. ಈ ಬಗ್ಗೆ ಪೋಷಕರು ತಮ್ಮ ಮಕ್ಕಳಲ್ಲಿ ಜಾಗ್ರತೆ ಮೂಡಿಸಬೇಕು. ಸಾಧ್ಯವಾದಷ್ಟು ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರವಿಡಬೇಕು. ಒಳ್ಳೆಯ ಆಹಾರ ಸೇವನೆ ಮತ್ತು ಉತ್ತಮ ನಿದ್ರೆ ಮಾಡುವುದರಿಂದ ಹೃದಯಾಘಾತ ತಡೆಯಲು ಸಾಧ್ಯ ಎಂದರು.
ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ ಸುಬ್ರಹ್ಮಣ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಎ. ಜೆ. ಕೃಷ್ಣೇಗೌಡ, ಸಿಡಿಪಿಒ ಎ. ಟಿ. ಮಲ್ಲೇಶ್, ಪ. ಪಂ. ಮುಖ್ಯಾಧಿಕಾರಿ ಮಂಜುನಾಥ್, ಡಾ. ಗಿರೀಶ್ ಬಸಪ್ಪ, ಡಾ. ಕವಿತಾ ಗಿರೀಶ್, ಪ. ಪಂ. ನಾಮ ನಿರ್ದೇಶಿತ ಸದಸ್ಯ ಸಂದೇಶ್, ಕಟ್ಟೆಗದ್ದೆ ನಾಗರಾಜ್, ಆರೋಗ್ಯ ಇಲಾಖೆ ಸತೀಶ್, ಮೋಹನ್, ಪೊಲೀಸ್ ಇಲಾಖೆ ಮತ್ತು ಹಲವು ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.
ಮಿನಿ ವಿದಾನಸೌಧ ಆವರಣದಿಂದ ವೀರಶೈವ ಕಲ್ಯಾಣ ಮಂಪಟದವರೆಗೆ ಮಾರಣಾಂತಿಕ ರೋಗ ತಡೆಗಟ್ಟುವ ಕುರಿತು ಬಿತ್ತಿಪತ್ರಗಳನ್ನು ಹಿಡಿದು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.