
ಹಾಸನ: ಬೇಲೂರು ತಾಲ್ಲೂಕಿನ ಚಂದನಹಳ್ಳಿ ಗ್ರಾಮದ ಬಳಿ ಮಂಗಳವಾರ ರಾತ್ರಿ ಕಾರು ಕೆರೆಗೆ ಬಿದ್ದ ಘಟನೆ ಇದೀಗ ಅಪಘಾತವಲ್ಲ, ಕೊಲೆ ಪ್ರಕರಣವಾಗಿದೆ ಎಂಬುದಾಗಿ ಬೆಳಕಿಗೆ ಬಂದಿದೆ. ಪ್ರೀತಿಯನ್ನು ನಿರಾಕರಿಸಿದ ಶ್ವೇತಾ ಎಂಬ ಮಹಿಳೆಯನ್ನು ಸಿನಿಮೀಯ ಶೈಲಿಯಲ್ಲಿ ಕೊಲೆಮಾಡಲಾಗಿದೆ.

ಗಂಡನಿಂದ ದೂರವಾಗಿ ತಂದೆ-ತಾಯಿಯ ಜೊತೆ ವಾಸಿಸುತ್ತಿದ್ದ ಶ್ವೇತಾ, ಹಾಸನದಲ್ಲಿ ಕೆಲಸ ಮಾಡುವಾಗ ವಿವಾಹಿತನಾದ ರವಿಯ ಪರಿಚಯಕ್ಕೆ ಬಂದಿದ್ದಳು. ಪತ್ನಿಯನ್ನು ಬಿಟ್ಟು ನಿನ್ನೊಟ್ಟಿಗೆ ಬರುತ್ತೇನೆ ಎಂದು ರವಿ ಒತ್ತಾಯಿಸುತ್ತಿದ್ದರೂ, ಶ್ವೇತಾ ಇದನ್ನು ನಿರಾಕರಿಸಿದ್ದರು. ಈ ಕಾರಣಕ್ಕೆ ಆಕ್ರೋಶಗೊಂಡ ರವಿ, ಮಂಗಳವಾರ ರಾತ್ರಿ ಕಾರಿನಲ್ಲಿ ಶ್ವೇತಾಳನ್ನು ಕರೆದುಕೊಂಡು ಹೋಗಿ ಚಂದನಹಳ್ಳಿ ಬಳಿ ಕಾರಿನ ಸಮೇತ ಕೆರೆಗೆ ತಳ್ಳಿದ್ದಾನೆ.ಘಟನೆ ಬಳಿಕ ತಾನು ಈಜಿ ದಡ ಸೇರಿದೇನೆ, ಕಾರಿನಲ್ಲಿದ್ದ ಶ್ವೇತಾ ನೀರಿನಲ್ಲಿ ಮುಳುಗಿದ್ದಾಳೆ ಎಂದು ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ್ದ. ಆದರೆ ಶ್ವೇತಾಳ ಕುಟುಂಬದವರ ದೂರು ಆಧರಿಸಿ ತನಿಖೆ ಮುಂದುವರಿಸಿದ ಅರೆಹಳ್ಳಿ ಪೊಲೀಸರು, ಇದು ಪೂರ್ವಯೋಜಿತ ಕೊಲೆ ಎಂಬುದನ್ನು ಪತ್ತೆಹಚ್ಚಿ, ಆರೋಪಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕಾಗಿ ನಡೆದ ಈ ದಾರುಣ ಕೊಲೆ ಘಟನೆ ಸ್ಥಳೀಯರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.