
ಬೀದರ್ ಜಿಲ್ಲೆಯ ಗಾಂಧಿಗಂಜ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಹತ್ವದ ಕಾರ್ಯಾಚರಣೆಯಲ್ಲಿ ಗಾಂಜಾ ದಂಧೆಗಾರರ ಜಾಲವನ್ನು ಬೆನ್ನಟ್ಟಿದ ಪೊಲೀಸರು ಸುಮಾರು 38 ಲಕ್ಷ 15 ಸಾವಿರ ರೂಪಾಯಿ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆ ಗಾಂಜಾ ವಿರುದ್ಧದ ಹೋರಾಟಕ್ಕೆ ಒಂದು ಪ್ರಮುಖ ಹಂತವೆನ್ನಲಾಗಿದೆ.
ಈ ದಾಳಿ ಜಿಲ್ಲಾ ಎಸ್‌ಪಿ ಪ್ರದೀಪ್ ಗುಂಟಿ ಅವರ ಮಾರ್ಗದರ್ಶನದಲ್ಲಿ, ಗಾಂಧಿಗಂಜ್ ಪೊಲೀಸ್ ಠಾಣೆಯ ಪಿಎಸ್ಐ ಆನಂದರಾವ್ ನೇತೃತ್ವದಲ್ಲಿ ನಡೆದಿದ್ದು, ಪೊಲೀಸ್ ಸಿಬ್ಬಂದಿಗಳಾದ ಶೇಖ್ ನಝೀರ್, ಪ್ರಕಾಶ್, ಸಿದ್ದರಾಮ, ರವಿ, ಬಿರಾದಾರ ಮತ್ತು ಇತರರ ಸಮರ್ಥ ಸಹಕಾರದಿಂದ ಯಶಸ್ವಿಯಾಗಿದೆ.
ಕಾರ್ಯಾಚರಣೆ ಗೆ ಮುಂದಾದ ಅಧಿಕಾರಿಗಳು ಚಿದ್ರಿ ರಸ್ತೆಯಲ್ಲಿರುವ ಸಂಗಮೇಶ್ವರ ಕಾಲೋನಿಯ ಮನೆಯಲ್ಲಿ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವ 38 ಕೆಜಿ 150 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯವನ್ನು ಸುಮಾರು ರೂ. 38,15,000 ಎಂದು ಅಂದಾಜಿಸಲಾಗಿದೆ. ದಾಳಿ ವೇಳೆ ಆರೋಪಿ ಮಹಿಳೆ ಇರಲಿಲ್ಲ ದೆ ಪೊಲೀಸರು ಮನೆಗೆ ದಾಳಿ ನಡೆಸುವಾಗ ಪರಾರಿಯಾಗಿದ್ದಾಳೆ ಎನ್ನಲಾಗಿದೆ. ಆರೋಪಿಯನ್ನು ಶೀಘ್ರದಲ್ಲಿ ಬಂಧಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ತನಿಖೆ ಮುಂದುವರಿಸಲಾಗುತ್ತಿದೆ.
ಬೀದರ್ ಜಿಲ್ಲೆಯ ಹಿಂದುಳಿದ ಭಾಗಗಳಲ್ಲಿ ಗಾಂಜಾ ಸಾಗಾಣಿಕೆ ಹಾಗೂ ವ್ಯಾಪಾರದ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ, ಈ ರೀತಿಯ ಕಾರ್ಯಾಚರಣೆಗಳು ಬಹುಮುಖ್ಯವಾಗಿದೆ. ಗಾಂಜಾ ಮತ್ತು ಇತರ ಮಾದಕ ವಸ್ತುಗಳ ವಿರುದ್ಧ ಜಿಲ್ಲೆಯಲ್ಲಿ ಶಿಸ್ತು ಕಾದಿರುವ ಎಸ್‌ಪಿ ಪ್ರದೀಪ್ ಗುಂಟಿ ಅವರು, “ಪೊಲೀಸ್ ಇಲಾಖೆ ನಶಾ ಮುಕ್ತ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ದಾಳಿಯಲ್ಲೂ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದ್ದು ಶ್ಲಾಘನೀಯ” ಎಂದು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ದಂಧೆಯ ಹಿನ್ನಲೆ, ಆರೋಪಿಗಳ ಹಿನ್ನೆಲೆ, ಬೆಂಬಲಿಗರ ಮಾಹಿತಿ ಕುರಿತಂತೆ ತನಿಖೆ ಮುಂದುವರೆದಿದೆ.
ಜಿಲ್ಲಾ ಜನತೆಗೆ ಸುರಕ್ಷಿತ, ನಶಾಮುಕ್ತ ಪರಿಸರ ಒದಗಿಸಲು ಪೊಲೀಸ್ ಇಲಾಖೆ ಹೆಜ್ಜೆಹೆಜ್ಜೆಯಾಗಿ ಮುಂದುವರಿಯುತ್ತಿದ್ದು, ಯಾವುದೇ ಅಕ್ರಮ ಚಟುವಟಿಕೆಗೆ ಶೂನ್ಯ ಸಹಿಷ್ಣುತೆಯ ನಿಲುವು ಅಳವಡಿಸಿಕೊಳ್ಳಲಾಗಿದೆ.