
ಅರಸೀಕೆರೆ : ವಿಷಪೂರಿತ ಆಹಾರ ಸೇವಿಸಿ ಸುಮಾರು 55 ಜನರು ಅಸ್ವಸ್ಥಗೊಂಡಿದ್ದು ಅವರೆಲ್ಲರನ್ನೂ ಹೆಚ್ಚಿನ ಚಿಕಿತ್ಸೆಗೆ ನಗರದ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಯಾವುದೇ ಪ್ರಾಣಾಪಾಯವಿಲ್ಲ ಎಂದು ಸರ್ಕಾರಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ನಗರ ಹೊರವಲಯದ ಅಮರಗಿರಿ ಮಾಲೇಕಲ್ಲು ತಿರುಪತಿ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ,ಭಾನುವಾರ ರಾತ್ರಿ ನಡೆದ ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಪಾರ ಸಂಖ್ಯೆಯ ಭಕ್ತರಲ್ಲಿ ಕೆಲವರು ದೇವಾಲಯದ. ಸಮೀಪದಲ್ಲಿರುವ ಖಾಸಗಿ ಸಮುದಾಯವೊಂದರಲ್ಲಿ ತಯಾರಿಸಿದ್ದ ಆಹಾರವನ್ನು ಸೇವಿಸಿದ್ದವರಿಗೆ ಕೆಲವು ಸಮಯದ ನಂತರ ವಾಂತಿ ಭೇದಿ ಕಾಣಿಸಿಕೊಂಡು ತೀವ್ರ ಅಸ್ವಸ್ಥಗೊಂಡಿದ್ದು ಸೋಮವಾರ ಇನ್ನೂ ಹೆಚ್ಚಿನವರಲ್ಲಿ ಇದು ಉಲ್ಬಣಿಸಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ,ಇವರಲ್ಲಿ ಹೆಚ್ಚಿನವರು ಮಾಲೇಕಲ್ಲು ತಿರುಪತಿ ಹಾಗೂ ಪಕ್ಕದ ಕಾರೇಹಳ್ಳಿ ಗ್ರಾಮದವರಾಗಿದ್ದಾರೆ.

ವಿಷಯ ತಿಳಿದ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಬಾರ ಆರೋಗ್ಯಾಧಿಕಾರಿ ರಂಗನಾಥ್ ಹಾಗೂ ಸಿಬ್ಬಂದಿಗಳು ಹಾಗೂ ವೈದ್ಯರು ಕಾರೇಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಸ್ವಸ್ಥರಾದವರಿಗೆ ಸ್ಥಳದಲ್ಲೇ ಚಿಕಿತ್ಸೆ ಒದಗಿಸಿ ಇನ್ನೂ ಕೆಲವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗಿದೆ.

ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಪ್ರಬಾರ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಂಗನಾಥ್ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮರಗಿರಿ ಮಾಲೇಕಲ್ಲು ತಿರುಪತಿ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವರ ಕಲ್ಯಾಣಿಯಲ್ಲಿ ಭಾನುವಾರ ಸಂಜೆ ನಡೆದ ದೇವರ ತೆಪ್ಪೋತ್ಸವದ ಬಳಿಕ ಖಾಸಗಿ ಸಮುದಾಯವೊಂದರಲ್ಲಿ ಆಹಾರ ಸೇವಿಸಿದ ಕೆಲವರಿಗೆ ಸೋಮವಾರ ಬೆಳಿಗ್ಗೆ ವಾಂತಿ ಭೇದಿ ಕಾಣಿಸಿಕೊಂಡಿದೆ, ನಮ್ಮ ಗಮನಕ್ಕೆ ಬಂದ ತಕ್ಷಣವೇ ಎಚ್ಚೆತ್ತುಕೊಂಡು ಅಸ್ವಸ್ಥಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ, ಇವರಲ್ಲಿ ಒಬ್ಬರು ಗರ್ಭಿಣಿ ಮಹಿಳೆ ಇದ್ದು ಅವರ ಮತ್ತು ಮಗುವಿನ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗುತ್ತಿದೆ.

ಆಹಾರ ತಯಾರಿಕೆ ಸಂದರ್ಭದಲ್ಲಿ ಸ್ವಚ್ಛತೆಯ ಕೊರತೆಯಿಂದ ಈ ರೀತಿ ಆಗಿರಬಹುದು ಎಂದು ಶಂಕಿಸಲಾಗಿದೆ, ಯಾವುದೇ ಪ್ರಾಣಾಪಾಯವಿಲ್ಲ, ಯಾರೂ ಆತಂಕ ಪಡುವ ಅಗತ್ಯವಿಲ್ಲ, ಆಹಾರ ತಯಾರಿಕೆಗೂ ಮುನ್ನ ಅಥವಾ ನಂತರ ಆಹಾರ ತಯಾರಿಸುವವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗಮನಕ್ಕೆ ತರಬೇಕಿತ್ತು, ಮುಂಚೆಯೇ ನಮ್ಮ ಕಚೇರಿಯ ಗಮನಕ್ಕೆ ತಂದಿದ್ದರೆ ಆಹಾರ ವಿತರಣೆಗೂ ಮುನ್ನ ಸ್ಥಳಕ್ಕೆ ಹೋಗಿ ಆಹಾರವನ್ನು ಪರೀಕ್ಷಿಸಿ ಸೇವಿಸಲು ಯೋಗ್ಯವಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದಿತ್ತು,

ನಮ್ಮ ಗಮನಕ್ಕೆ ಬರದೇ ಈ ರೀತಿ ನಡೆದಿದೆ, ಅಡುಗೆಗೆ ಬಳಸಿದ ನೀರು ಮತ್ತು ಕುಡಿಯುವ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದ್ದು ನೀರಿನಲ್ಲಿ ಯಾವುದೇ ದೋಷವಿಲ್ಲ ಎಂದು ತಿಳಿದು ಬಂದಿದೆ, ವಿಷಪೂರಿತ ಆಹಾರ ಎಂದು ಶಂಕಿಸಲಾಗಿದ್ದು ಹೆಚ್ಚಿನ ಮಾಹಿತಿಗೆ ಮೈಸೂರಿನ ಮುಖ್ಯ ಆಹಾರ ವಿಶ್ಲೇಷಕರು ವಿಭಾಗೀಯ ಆಹಾರ ಪ್ರಯೋಗಶಾಲೆಗೆ ಕಳುಹಿಸಲಾಗಿದೆ, ಇನ್ನು ಮೂರು ದಿನಗಳಲ್ಲಿ ವರದಿ ಬರಲಿದೆ, ಅನಂತರ ಜನರ ಅಸ್ವಸ್ಥತೆಗೆ ನಿಖರವಾದ ಕಾರಣ ತಿಳಿಯಲಿದೆ ಎಂದರು.