
ಬೆಂಗಳೂರು :
ಪೀಣ್ಯ, ದಾಸರಹಳ್ಳಿ: ಹೈಕೋರ್ಟ್ ಆದೇಶದಂತೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ₹110 ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ಪೈಕಿ ₹78 ಕೋಟಿ ಅನುದಾನದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡದಿರುವ ಬಗ್ಗೆ ಶಾಸಕ ಎಸ್. ಮುನಿರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಾನು ಬಿಜೆಪಿ ಶಾಸಕನೆಂಬ ಕಾರಣಕ್ಕೆ ಈ ಅನುದಾನಕ್ಕೆ ಅನುಮೋದನೆ ನೀಡುವುದಿಲ್ಲ ಎಂಬ ಧೋರಣೆ ಸರ್ಕಾರದವರದ್ದಾಗಿದೆ. ನಾನು ಈ ಕುರಿತಂತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಹಲವು ಬಾರಿ ಪತ್ರ ಬರೆದರೂ ಸ್ಪಂದನೆ ದೊರಕಿಲ್ಲ,” ಎಂದು ಅವರು ದೂರು ಹಾಕಿದ್ದಾರೆ.
2022-23 ಹಾಗೂ 2023-24ನೇ ಸಾಲಿನಲ್ಲಿ ಮುಖ್ಯಮಂತ್ರಿ ಅಮೃತ ನವ ನಗರೋತ್ಥಾನ ಯೋಜನೆ ಅಡಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳ ಪ್ಯಾಕೇಜ್ ಅನುಮೋದನೆಗಾಗಿ ಪುನಃ ಮನವಿ ಸಲ್ಲಿಸಿದ್ದರೂ, ಇದುವರೆಗೂ ಕ್ರಮ ಕೈಗೊಂಡಿಲ್ಲ. ಈ ಕಾರಣದಿಂದ ಕ್ಷೇತ್ರದ ಮೂಲಭೂತ ಸೌಲಭ್ಯ ಅಭಿವೃದ್ಧಿ ಯೋಜನೆಗಳು ಅಡಚಣೆಗೆ ಒಳಗಾಗುತ್ತಿವೆ.
“ಅನುಮೋದನೆಗಾಗಿ ಬಾಕಿ ಇರುವ ಕಡತಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡದೆ ವಿಳಂಬ ಮಾಡಲಾಗುತ್ತಿದೆ. ಇದರಿಂದ ನನ್ನ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುಂಠಿತವಾಗುತ್ತಿದೆ. ಸರ್ಕಾರ ತಮ್ಮ ನಿರ್ಧಾರ ಪುನರ್‍ವಿಚಾರಿಸದಿದ್ದರೆ, ಮುಂದಿನ ದಿನಗಳಲ್ಲಿ ನಾವು ಮುಖ್ಯಮಂತ್ರಿಗಳ ಮನೆ ಎದುರು ಧರಣಿ ನಡೆಸಲು ಹಿಂಜರಿಯುವುದಿಲ್ಲ,” ಎಂದು ಮುನಿರಾಜು ಎಚ್ಚರಿಸಿದ್ದಾರೆ.