
ದಾವಣಗೆರೆ ಜಿಲ್ಲೆ:
ಚನ್ನಗಿರಿ ತಾಲ್ಲೂಕಿನ ದೋಣಿಹಳ್ಳಿ ಬಳಿ ಮಂಗಳವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಒಬ್ಬರು ಸಾವಿಗೀಡಾಗಿದ್ದು, ಏಳು ಮಂದಿ ಗಾಯಗೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರಿನಿಂದ ಪ್ರವಾಸ ಮುಗಿಸಿ ಚನ್ನಗಿರಿಗೆ ಹಿಂದಿರುಗುತ್ತಿದ್ದ ತಂಡದವರು ದೋಣಿಹಳ್ಳಿ ಹತ್ತಿರದ ರಸ್ತೆಯ ಬದಿಯಲ್ಲಿ ಕೆಲಕಾಲ ನಿಂತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಅತೀ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಸಂದೇಶ ನಾಯ್ಕ್ ಎಂಬ ಯುವಕ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದ ತೀವ್ರತೆಗೆ ಬೈಕ್ ಹಾಗೂ ಕಾರು ಸಂಪೂರ್ಣ ಜಖಂಗೊಂಡಿವೆ.
ಘಟನೆಯ ಸಂದರ್ಭದಲ್ಲಿದ್ದ ರವಿ, ಪ್ರವೀಣ್, ವೆಂಕಟೇಶ್, ಚೇತನ್, ರುದ್ರನಾಯ್ಕ್ ಹಾಗೂ ಆಂಜನೇಯ ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ವೈದ್ಯರ ಪ್ರಕಾರ ಅವರ ಸ್ಥಿತಿ ಸ್ಥಿರವಾಗಿದ್ದು ಆತಂಕಕರವಾಗಿಲ್ಲ.
ಘಟನೆಯ ಕುರಿತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಚಾಲಕ ವೇಗ ನಿಯಂತ್ರಣ ಕಳೆದುಕೊಂಡಿರುವುದು, ಹಾಗೂ ಸರಿಯಾದ ಜಾಗರೂಕತೆ ವಹಿಸದಿರುವುದು ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.