
ಹಾಸನ ಜಿಲ್ಲೆ :
ಆಲೂರು ಪಟ್ಟಣದ ಸೆಸ್ಕಾಂ ಉಪ ವಿಭಾಗದಲ್ಲಿ 75% ಮಹಿಳಾ ಸಿಬ್ಬಂದಿಗಳೇ ಇದ್ದು, ಹತ್ತು ಹಲವು ವರ್ಷಗಳಿಂದ ಇಲ್ಲಿಯ ಸಿಬ್ಬಂದಿಗಳಿಗಾಗಲಿ, ಗುತ್ತಿಗೆದಾರರಿಗಾಗಲಿ, ಕಚೇರಿಗೆ ಬರುವ ಯಾವುದೇ ಸಾರ್ವಜನಿಕರಿಗಾಗಲಿ ಶೌಚಾಲಯವೇ ಇಲ್ಲ. ಇಲಾಖೆಯ ಆವರಣದ ಸುತ್ತ ಇಂಟರ್ಲಾಕ್ ವ್ಯವಸ್ಥೆ ಇದೆ, ಸಿಬ್ಬಂದಿಗಳ ವಾಹನಗಳ ನಿಲುಗಡೆಗೆ ಉತ್ತಮ ಶೆಡ್ ಇದೆ, ಆದರೆ ಅಗತ್ಯವಾಗಿ ಬೇಕಾಗಿರುವ ಶೌಚಾಲಯವೇ ಇಲ್ಲದಂತಾಗಿದೆ. ಇಲ್ಲಿನ ಸಿವಿಲ್ ಇಂಜಿನಿಯರ್ ಗಳು ಹಾಗೂ ಅಧಿಕಾರಿಗಳು ಕಳೆದ ಎರಡು ಮೂರು ವರ್ಷಗಳಲ್ಲಿ ಇಂಟರ್ಲಾಕ್ ವ್ಯವಸ್ಥೆ ಹಾಗೂ ವಾಹನಗಳ ಪಾರ್ಕಿಂಗ್ ಗೆ ಶೆಡ್ ನಿರ್ಮಾಣ ಮಾಡಿದ್ದು, ಇಲ್ಲಿಗೆ ಶೌಚಾಲಯಗಳ ಅವಶ್ಯಕತೆ ಇದೆ ಎಂಬುದನ್ನೇ ಮರೆತಿದ್ದಾರೆ, ಪುರುಷರಿಗೆ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಹೋಗಲಿ ಕೇವಲ ಒಂದೇ ಒಂದು ಶೌಚಾಲಯ ಕೂಡ ಇಲ್ಲ. ಮೊದಲು ಇದ್ದ ಶೌಚಾಲಯಗಳನ್ನು ಬಳಸಲು ಯೋಗ್ಯ ಇಲ್ಲ ಎಂದು ಬೇಡದ ಘನ ತ್ಯಾಜ್ಯ ವಸ್ತುಗಳನ್ನು ಇಟ್ಟು ಮುಚ್ಚಲಾಗಿದೆ. ಇಲ್ಲಿನ ಸಿಬ್ಬಂದಿಗಳಾಗಲಿ ಸಾರ್ವಜನಿಕರಾಗಲಿ ಶೌಚಾಲಯಕ್ಕೆ ಹೋಗಬೇಕೆಂದರೆ ಪಕ್ಕದ ಸಾಕಾಧಿಕಾರಿಗಳ ಕಚೇರಿಗೆ ಹೋಗಬೇಕಾಗುತ್ತದೆ. ಇಲ್ಲವೇ ಇಲ್ಲಿಂದ 500 ಮೀಟರ್ ದೂರವಿರುವ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಹೋಗಬೇಕಾಗುತ್ತದೆ. ಇದೀಗ ಮಳೆಗಾಲ ಆರಂಭವಾಗಿರುವುದರಿಂದ ಸಿಬ್ಬಂದಿಗಳ ಹಾಗೂ ಸಾರ್ವಜನಿಕರ ಪಾಡು ಯಾರಿಗೂ ಹೇಳ ತೀರದಾಗಿದೆ. ಇವರ ಕಾಮಗಾರಿಯನ್ನು ನೋಡಿದರೆ,, ಗುತ್ತಿಗೆದಾರರಿಗೂ ಅಧಿಕಾರಿಗಳಿಗೂ ಕಾಮಗಾರಿಯಿಂದ ಅಧಿಕ ಲಾಭ ಇರುವ ಕೆಲಸಗಳಿಗೆ ಹಣ ಮಂಜೂರು ಮಾಡಿ ಮೂಲಭೂತವಾಗಿ ಅಗತ್ಯವಿರುವ ಕೆಲಸಗಳನ್ನೇ ಮರೆತು ಬಿಟ್ಟಿರುವಂತಿದೆ. ಸೆಸ್ಕಾಂ ಇಲಾಖೆಗೆ ಪ್ರತಿನಿತ್ಯ ನೂರಾರು ಜನಗಳು ಬೆಳಿಗ್ಗೆ ಇಂದ ಸಂಜೆವರೆಗೂ ಬಿಲ್ ಪಾವತಿಗೆ ಅಥವಾ ವಿದ್ಯುತ್ ಸಮಸ್ಯೆಗಳ ದೂರುಗಳನ್ನು ನೀಡಲು ಅಥವಾ ಯಾವುದೇ ಮಾಹಿತಿ ಪಡೆಯಲು ವಯಸ್ಕರು, ಶಾಲಾ – ಕಾಲೇಜು ಮಕ್ಕಳು, ಕೂಲಿ ಕಾರ್ಮಿಕರು, ರೈತರು ಪ್ರತಿನಿತ್ಯ ಬರುತ್ತಲೇ ಇರುತ್ತಾರೆ. ಆದರೆ ಬಂದವರಿಗೆ ಇಲ್ಲಿ ಶೌಚಾಲಯವೇ ಇಲ್ಲ. ಹಾಗೂ ಇಲಾಖೆಯಲ್ಲಿ ವಿಕಲಾಂಗ ಚೇತನರಿದ್ದು, ಹಾಗೂ ಬರುವ ವಿಕಲಾಂಗ ಚೇತನ ಸಾರ್ವಜನಿಕರಿಗೆ ಯಾವುದೇ ವೀಲ್ ಚೇರ್ ನ ವ್ಯವಸ್ಥೆ ಕೂಡ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಗುತ್ತಿಗೆದಾರರು ಹಾಗೂ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.