September 10, 2025
sathvikanudi - ch tech giant

ಮಹಿಳೆಯ ಮೇಲಿನ ದೌರ್ಜನ್ಯವು ಅವಳ ಹಕ್ಕುಗಳ ಉಲ್ಲಂಘನೆ: ಸಾಹಿತಿ ವಿದ್ಯಾವತಿ ಅಂಕಲಗಿ….!?

Spread the love



ಸಿಂದಗಿ: ಮಹಿಳೆಯರ ಮೇಲಿನ ದೌರ್ಜನ್ಯವು ವಿಶ್ವದಾದ್ಯಂತ ಅತ್ಯಂತ ಪ್ರಚಲಿತ ಮತ್ತು ವ್ಯಾಪಕವಾದ ಮಾನವ ಹಕ್ಕುಗಳ ಉಲ್ಲಂಘನೆಗಳಲ್ಲಿ ಒಂದಾಗಿದೆ ಎಂದು ವಿಜಯಪುರದ ಹಿರಿಯ ಸಾಹಿತಿ ಹಾಗೂ ನ್ಯಾಯವಾದಿ ವಿದ್ಯಾವತಿ ಅಂಕಲಗಿ ಹೇಳಿದ್ದಾರೆ.

ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ಜಾಗತಿಕವಾಗಿ ಪ್ರತೀ ಮೂರು ಮಹಿಳೆಯರಲ್ಲಿ ಒಬ್ಬರು ತಮ್ಮ ಜೀವನದಲ್ಲಿ ಕನಿಷ್ಠ ಒಮ್ಮೆ ದೈಹಿಕ ಅಥವಾ ಲೈಂಗಿಕ ಹಿಂಸೆಗೆ ಒಳಗಾಗುತ್ತಿದ್ದಾರೆ ಎಂಬ ವಾಸ್ತವವನ್ನು ಉಲ್ಲೇಖಿಸಿದರು. ಮಹಿಳೆಯರ ವಿರುದ್ಧದ ಹಿಂಸೆ ಕೇವಲ ಸಮಾಜದಲ್ಲಿ ಮಾತ್ರವಲ್ಲ, ಮನೆಯಲ್ಲಿಯೂ ನಡೆಯುತ್ತಿದ್ದು, ಕುಟುಂಬದ ಸದಸ್ಯರೇ ಮಹಿಳೆಯರ ಹಕ್ಕುಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.



ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದ ನಿಡುಗುಂದಿ ಬ್ರಹ್ಮಾಕುಮಾರಿಸ್ ಸೇವಾ ಕೇಂದ್ರದ ಸಂಚಾಲಕಿ ರೇಣುಕಾ ಅಕ್ಕನವರು, ಆಧ್ಯಾತ್ಮಿಕತೆ ಪುರಷ ಮತ್ತು ಮಹಿಳೆಯರ ಸಮಾನತೆಯನ್ನು ಒತ್ತಿಹೇಳುತ್ತದೆ ಎಂದು ಹೇಳಿದರು. “ಸ್ಥೂಲ ಶರೀರ ಪುರುಷ ಅಥವಾ ಸ್ತ್ರೀಯೆಂದು ಗುರುತಿಸಲ್ಪಡಬಹುದು, ಆದರೆ ಆಂತರ್ಯದ ಚೈತನ್ಯ ಆತ್ಮವು ಒಂದೇ. ದೇಹಕ್ಕೆ ಒತ್ತಾಯ ನೀಡದೆ, ಆತ್ಮವನ್ನು ಅರಿಯಲು ಸತ್ಸಂಗದ ಪ್ರಭಾವ ಅಗತ್ಯ” ಎಂದು ಅವರು ತಿಳಿಸಿದರು.



ಇನ್ನೋರ್ವ ಅತಿಥಿಯಾಗಿ ಮಾತನಾಡಿದ ಸಿಂದಗಿ ನಗರದ ಅನನ್ಯ ಆಸ್ಪತ್ರೆಯ ವೈದ್ಯೆ ಶ್ರೀದೇವಿ ಬಿರಾದಾರ, “ಮಹಿಳೆಯರ ಅಸ್ತಿತ್ವವನ್ನು ಕೇವಲ ತಂದೆ ಅಥವಾ ಗಂಡನ ಸೇವೆಗಾಗಿಯೇ ನೋಡಲಾಗುತ್ತದೆ. ಈ ಪಿತೃತ್ವ ಮಾದರಿಯೆ ಮುಗಿಯದ ಬೇಡಿಕೆಯಾಗಿದೆ. ಪುರುಷರ ಮೇಲುಕೀಳೆ ಸರಿಹೋಗಲು ಮಹಿಳೆಯರ ಸ್ವಾಭಿಮಾನ ಬೆಳೆದರೆ ಮಾತ್ರ ಸಾಧ್ಯ” ಎಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಜೀವಿನಿ ಆಸ್ಪತ್ರೆಯ ವೈದ್ಯೆ ಆಫ್ರಿನ್ ನಾಗರಹಳ್ಳಿ, ನಿಡುಗುಂದಿಯ ಗ್ರಾಮೀಣ ವಿದ್ಯಾವರ್ಧಕ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ನೀಲಾಂಬಿಕಾ ಅಕ್ಕಿ ವೇದಿಕೆ ಮೇಲಿದ್ದರು. ಸಿಂದಗಿ ಸೇವಾ ಕೇಂದ್ರದ ಸಂಚಾಲಕಿ ಪವಿತ್ರಕ್ಕನವರು ಸಾನಿಧ್ಯ ವಹಿಸಿದ್ದರು.

ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಮಹಿಳಾ ಕ್ರಿಕೆಟ್ ಪಟು ಜಯಶ್ರೀ ಕೂಚಬಾಳ, ಗೀಗಿ ಪದ ಗಾಯಕಿ ರೇಣುಕಾ ಮಾದರ ಮತ್ತು ಸಿಂದಗಿ ಪುರಸಭೆಯ ಎಲ್ಲಾ ಮಹಿಳಾ ಪೌರ ಕಾರ್ಮಿಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ಮನಗೂಳಿ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಜಿ. ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ನೀಡಿದರು.

WhatsApp Image 2025-06-21 at 19.57.59
Trending Now