
ಆಲೂರು, ಜೂನ್ 24:
ಆಲೂರು ತಾಲ್ಲೂಕಿನ ಮರಸು ಗ್ರಾಮದ ಶ್ರೀ ತಿರುಮಲ ರಂಗನಾಥಸ್ವಾಮಿ ಮತ್ತು ಉಡಸಮ್ಮ, ಮತ್ಯಾಲಮ್ಮ ದೇವತೆಗಳ ಪುರಾತನ ದೇವಾಲಯದ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸುಮಾರು ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಈ ಕಾಮಗಾರಿ, ಆಲೂರು ತಾಲೂಕು ಹಾಗೂ ಹಾಸನ ಜಿಲ್ಲಾಡಳಿತದ ಸಹಕಾರದಿಂದ ಪುನಾರಂಭವಾಗಿ ಸಮರ್ಪಕವಾಗಿ ಪೂರ್ಣಗೊಂಡಿದೆ.

ದೇವಾಲಯದ ಪುನರ್ ನಿರ್ಮಾಣದ ಪೂರ್ಣತೆಗೆ ಅಂಗವಾಗಿ, ನಿನ್ನೆ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ, ಹವನಗಳೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಗ್ರಾಮಸ್ಥರು ಭಕ್ತಿ ಭಾವದಿಂದ ಪಾಲ್ಗೊಂಡು, ಶ್ರದ್ಧಾ ಪೂರ್ವಕವಾಗಿ ಭಾಗವಹಿಸಿದರು.
ಈ ಕಾರ್ಯಕ್ಕೆ ಮುಂಚಿತವಾಗಿ ದೇವಾಲಯದ ಆವರಣದ ಸ್ವಚ್ಛತೆ, ಶಿಲಾಮಯ ಪೂಜಾ ಮಂಟಪದ ನಿರ್ಮಾಣ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ಪಾಲಿಸುವಲ್ಲಿ ಆಡಳಿ ಮಂಡಳಿಯ ಪಾತ್ರ ಮುಖ್ಯವಾಗಿದೆ. ಹಾಸನ ಜಿಲ್ಲಾಡಳಿತ ಹಾಗೂ ಆಲೂರು ತಾಲೂಕು ಆಡಳಿತದ ನಿರಂತರ ಸಹಕಾರಕ್ಕೆ ಮರಸು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸಿದರು.
“ಪುರಾತನ ದೇವಾಲಯಗಳ ಸಂರಕ್ಷಣೆಯು ನಮ್ಮ ಸಂಸ್ಕೃತಿಯ ಭಾಗ. ಇಂತಹ ಕಾರ್ಯಗಳಿಗೆ ಆಡಳಿತ ಮುಂದೆ ಬಂದಿರುವುದು ಪ್ರಶಂಸನೀಯ” ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.
ಈ ಧಾರ್ಮಿಕ ಸಮಾರಂಭದಲ್ಲಿ ಮರಸು ಗ್ರಾಮದ ಭಕ್ತರು ಜೊತೆಗೆ ಆಲೂರಿನ ಸುತ್ತಮುತ್ತಲಿನ ಗ್ರಾಮಸ್ಥರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಮಾರಂಭ ಶಾಂತಿಯುತವಾಗಿ, ಸಂಸ್ಕೃತಿಪೂರ್ಣವಾಗಿ ನೆರವೇರಿತು.