
ವರದಿ: ರಮೇಶ್ ಡಿಜೆ, ಆನಂದಪುರ
ಶಿರಸಿ ಹಾಗೂ ಸಾಗರದ ಶ್ರೀ ಜಗದ್ಗುರು ಮಾರಿಕಾಂಬ ದೇವಿಯ ಸಹೋದರಿಯಾದ ಆನಂದಪುರ ಗ್ರಾಮದ ಕಡ್ಲೆ ಹಂಕ್ಲು ಮಾರಿಕಾಂಬ ತಾಯಿಯ ತವರು ಮನೆಯ ದೇವಾಲಯದ ನೂತನ ಗರ್ಭಗುಡಿ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ರಾಜ್ಯದ ಅತಿ ಹೆಚ್ಚು ಭಕ್ತರನ್ನು ಸೆಳೆಯುವ ಈ ಕ್ಷೇತ್ರದಲ್ಲಿ, ದೇವಾಲಯದ ಪ್ರಮುಖ ಅಭಿವೃದ್ಧಿ ಹಂತದ ಶಿಲಾಯಾನ ಕಾರ್ಯಕ್ರಮ ಗುರುವಾರ ಬೆಳಗ್ಗೆ ಸಂಭ್ರಮದಿಂದ ನಡೆಯಿತು.
ಈ ದಿನ ಮುರುಡೇಶ್ವರದಿಂದ ವಿಶೇಷವಾಗಿ ತರಿಸಲಾದ ಶಿಲಾ ವಿಗ್ರಹಗಳು ಆನಂದಪುರಕ್ಕೆ ಆಗಮಿಸಿತು. ಭಕ್ತರ ನೂರಾರು ಸಂಖ್ಯೆಯ ಮಧ್ಯೆ, ದೇವಸ್ಥಾನದ ಅಧ್ಯಕ್ಷರಾದ ವೆಂಕಟೇಶ್ ಅವರ ನೇತೃತ್ವದಲ್ಲಿ ಗರ್ಭಗುಡಿ ನಿರ್ಮಾಣದ ಮುಂದಿನ ಹಂತಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಈಶ್ವರ, ಜಯಪ್ಪಗೌಡ, ಗಣಪತಿ, ಬಸವರಾಜ್, ಮಧುಸೂದನ್ ಸೇರಿದಂತೆ ಕಮಿಟಿಯ ಪ್ರಮುಖರು ಹಾಗೂ ಗ್ರಾಮಸ್ಥರು ಭಕ್ತಿಯಿಂದ ಪಾಲ್ಗೊಂಡರು.
ಅಧ್ಯಕ್ಷ ವೆಂಕಟೇಶ್ ಅವರು ಮಾತನಾಡುತ್ತಾ, “ಈ ನೂತನ ಗರ್ಭಗುಡಿ ನಿರ್ಮಾಣಕ್ಕೆ ಸುಮಾರು ₹1 ಕೋಟಿ ಮೊತ್ತದ ವೆಚ್ಚ ಬರುವ ನಿರೀಕ್ಷೆ ಇದೆ. ಡಿಸೆಂಬರ್ ತಿಂಗಳ ಕೊನೆ ವೇಳೆಗೆ ಪೂರ್ಣಗೊಳ್ಳಲಿರುವ ಈ ಗರ್ಭಗುಡಿ, ದೇವಿಯ ಐತಿಹಾಸಿಕ ಹಾಗೂ ಭಕ್ತಿಭಾವದ ಸಂಕೇತವಾಗಲಿದೆ” ಎಂದು ಹೇಳಿದರು.
ಶಿಲಾಯಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಮುತ್ತ ಭಕ್ತರ ಉತ್ಸಾಹದ ಕೂಗು, ಸಂಭ್ರಮದ ವಾತಾವರಣ ಆವರಿಸಿತ್ತು. ಸ್ಥಳೀಯ ಗ್ರಾಮಸ್ಥರು ತಮ್ಮ ಭಕ್ತಿಯಿಂದ ಶ್ರಮದಾನ ಮಾಡಿದ್ದು, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವಲ್ಲಿ ಮಹತ್ತರ ಪಾತ್ರ ವಹಿಸಿದರು. ನೂತನ ಗರ್ಭಗುಡಿ ದೇವಾಲಯ, ಆನಂದಪುರ ಮಾರಿಕಾಂಬ ತಾಯಿಯ ದೇವಾಲಯದ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲಿರುವ ಭರವಸೆ ಮೂಡಿಸಿದೆ.