
ರಾಮನಗರ ಜಿಲ್ಲೆ :
ಚನ್ನಪಟ್ಟಣ ತಾಲೂಕಿನಲ್ಲಿ ಮನಕಲಕಿಸುವ ಘಟನೆ ನಡೆದಿದೆ. ಮದ್ದೂರು ತಾಲ್ಲೂಕಿನ ಅಂಬರಹಳ್ಳಿ ಗ್ರಾಮದ 20 ವರ್ಷದ ಮಹಾಲಕ್ಷ್ಮಿ ಎಂಬ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಶವ ಸಿಂಗರಾಜಿಪುರ ಕೆರೆಯಲ್ಲಿ ಪತ್ತೆಯಾಗಿದೆ.
ಮಹಾಲಕ್ಷ್ಮಿ ಮೈಸೂರಿನಲ್ಲಿ ಪ್ಯಾರಾಮೆಡಿಕಲ್ ಕೋರ್ಸ್ ಅಧ್ಯಯನ ಮಾಡುತ್ತಿದ್ದರು. ನಿನ್ನೆ ಸಂಜೆ ಸಿಂಗರಾಜಿಪುರ ಕೆರೆಯ ದಡದಲ್ಲಿ ಅವರ ಗುರುತಿನ ಚೀಟಿ (ಐಡಿ ಕಾರ್ಡ್), ಬ್ಯಾಗ್ ಹಾಗೂ ಕೆಲವು ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ, ಸ್ಥಳೀಯರು ತಕ್ಷಣವೇ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು.
ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರ ತಂಡ ರಾತ್ರಿಯಿಡೀ ಶೋಧ ಕಾರ್ಯ ನಡೆಸಿದ ಬಳಿಕ, ಇಂದು ಬೆಳಿಗ್ಗೆ ಕೆರೆಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಈ ಘಟನೆಗೆ ಆತ್ಮಹತ್ಯೆ ಎಂಬ ಶಂಕೆ ವ್ಯಕ್ತವಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಮೃತಳ ಕುಟುಂಬಸ್ಥರ ಹೇಳಿಕೆಯನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆತ್ಮಹತ್ಯೆಗೆ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೆಚ್ಚಿನ ವಿದ್ಯಾರ್ಥಿನಿಯಾಗಿದ್ದ ಮಹಾಲಕ್ಷ್ಮಿಯ ಅಕಾಲಿಕ ಮರಣದಿಂದಾಗಿ ಕುಟುಂಬಸ್ಥರು ಹಾಗೂ ಆಕೆಯ ಸ್ನೇಹಿತರು ಆಘಾತಕ್ಕೊಳಗಾಗಿದ್ದಾರೆ.
ಈ ಸಂಬಂಧ ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕಿಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.