
ವರದಿ: ರಮೇಶ್ ಡಿಜಿ, ಆನಂದಪುರ | ಸಾತ್ವಿಕ ನುಡಿ ಪತ್ರಿಕೆ | ದಿನಾಂಕ: ಜುಲೈ 27
ಸಾಗರ ತಾಲ್ಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಮನೆಗಳು ಕುಸಿದು ಹಲವಾರು ಕುಟುಂಬಗಳು ಬಡವರು ಬೀದಿಗಿಳಿಯುವಂತಾಗಿದೆ. ಈ ಹಿನ್ನಲೆಯಲ್ಲಿ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು ಭಾನುವಾರ ದಿನವಿಡೀ ಆನಂದಪುರ ಹೋಬಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿದರು.

ಶಾಸಕರು ನೊಂದ ಕುಟುಂಬಸ್ಥರ ಮನೆಯನ್ನು ಸ್ಥಳದಲ್ಲೇ ಪರಿಶೀಲಿಸಿ, ತೀವ್ರ ಹಾನಿಗೊಳಗಾದ ಮನೆಗಳಿಗೆ ತಾವೇ ಖುದ್ದಾಗಿ ಪರಿಹಾರ ಒದಗಿಸಲು ಮುಂದಾದರು. ಗ್ರಾಮಸ್ಥರೊಂದಿಗೆ ನೇರವಾಗಿ ಮಾತುಕತೆ ನಡೆಸಿದ ಅವರು, “ಹೆಚ್ಛೆದಷ್ಟು ಹಣ ಖರ್ಚಾದರೂ ಪರವಾಗಿಲ್ಲ, ಜನರು ಸುರಕ್ಷಿತವಾಗಿ ವಾಸಮಾಡಲು ಅನುಕೂಲವಾಗುವ ವ್ಯವಸ್ಥೆ ಮಾಡಬೇಕು,” ಎಂದು ಕಾಂಗ್ರೆಸ್ ಮುಖಂಡರಿಗೆ ನಿರ್ದೇಶನ ನೀಡಿದರು.
ದಾಸಕೊಪ್ಪದಲ್ಲಿ 75 ವರ್ಷ ವಯಸ್ಸಿನ ರಂಗಮ್ಮ ಎಂಬುವವರ ಮನೆಯನ್ನು ಭೇಟಿ ಮಾಡಿದ ಶಾಸಕರು, ಕುಸಿದ ಮನೆಯ ಸ್ಥಿತಿಗೆ ಮನಸ್ಸು ಮಲಗಿಸಿ, ತಮ್ಮ ಸ್ವಂತ ವೆಚ್ಚದಲ್ಲಿ ಮನೆ ದುರಸ್ತಿಗೆ ಸಹಾಯ ನೀಡುವುದಾಗಿ ಘೋಷಿಸಿದರು. ಅಲ್ಲದೆ ಆ ಮನೆಯವರಿಗೆ ತಾತ್ಕಾಲಿಕವಾಗಿ ಅಗತ್ಯವಿರುವ ದಿನಸಿ ಸಾಮಾನು, ಹಾಸಿಗೆ, ಬಟ್ಟೆ, ಅಡಿಗೆ ಪಾತ್ರೆಗಳನ್ನು ಕೂಡ ಒದಗಿಸುವಂತೆ ಸ್ಥಳೀಯ ಮುಖಂಡರಿಗೆ ಸೂಚನೆ ನೀಡಿದರು.
ಅಲ್ಲದೇ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳನ್ನು ಕೂಡ ತ್ವರಿತವಾಗಿ ಮಂಜೂರು ಮಾಡಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ, ನಾಡಕಚೇರಿ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆನಂದಪುರ, ಮುಂಬಾಳು, ದಾಸಕೊಪ್ಪ, ಅಶೋಕ ರಸ್ತೆ, ಬೈರಾಪುರ, ಹಿರಿಹರಕ, ಆಚಾಪುರ, ಇಸ್ಲಾಂಪುರ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ತಮ್ಮ ಖರ್ಚಿನಿಂದಲೇ ತಕ್ಷಣ ಸಹಾಯಧನ ಒದಗಿಸಿದರು.
ಈ ಸಂದರ್ಭದಲ್ಲಿ ಶಾಸಕರು, “ಇನ್ನು ಮುಂದೆ ಮಳೆಯ ಹಾನಿ ಅಥವಾ ಆರೋಗ್ಯ ತೊಂದರೆ ಇದ್ದರೆ ನೇರವಾಗಿ ನನಗೆ ತಿಳಿಸಿ. ಕೂಡಲೇ ಪರಿಹಾರ ನೀಡುವ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಭರವಸೆ ನೀಡಿದರು.
ಈ ಸಮಯದಲ್ಲಿ ಆನಂದಪುರ ಕಾಂಗ್ರೆಸ್ ಘಟಕದ ಅಧ್ಯಕ್ಷ ಗಜೇಂದ್ರ ಯಾದವ್, ಮಾಜಿ ಉಪಾಧ್ಯಕ್ಷ ಉಮೇಶ್ ಎನ್, ಸೋಮಶೇಖರ್ ಲವ್ಗೆರೆ, ಚೇತನ್ ಕಣ್ಣೂರ್, ಸುರೇಶ್ ಎನ್ (ದಾಸಕೊಪ್ಪ), ಮಂಜುನಾಥ್, ಅರುಣ್ (ಸಿದ್ಧೇಶ್ವರ ಕಾಲೋನಿ) ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.