September 9, 2025
sathvikanudi - ch tech giant

ಒಂಟಿ ಆನೆಯ ದಾಳಿಯಿಂದ ಬೆಳೆ ನಾಶ: ಸಾರ್ವಜನಿಕರಿಂದ ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ…!?

Spread the love



ಶಿವಮೊಗ್ಗ ಜಿಲ್ಲೆ ಕೊರಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಚೀನಕಟ್ಟೆ ಗ್ರಾಮದಲ್ಲಿ ಒಂಟಿ ಆನೆಯೊಂದು ಜಮೀನಿಗೆ ನುಗ್ಗಿ ಭಾರಿ ಬೆಳೆ ನಷ್ಟ ಮಾಡಿರುವ ಘಟನೆ ನಡೆದಿದೆ. ಕಾಡಾನೆ ಶುಕ್ರವಾರ ರಾತ್ರಿ 2 ಗಂಟೆ ಸುಮಾರಿಗೆ ಕಡೇಕಲ್ ಅರಣ್ಯ ಪ್ರದೇಶದ ಸಮೀಪವಿರುವ ದೊಡ್ಡರಂಗಯ್ಯನವರ ಒಡ್ಡಿನಗದ್ದೆ ಸ.ನ. 77/1 ಜಮೀನಿಗೆ ಪ್ರವೇಶಿಸಿ ಅಡಿಕೆ ಮರ, ಬಾಳೆ ಮರ, ಹಾಗೂ ಇತರ ಬೆಳೆಗಳನ್ನು ಧ್ವಂಸ ಮಾಡಿದೆ.



ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ರೈತರು ಹಾಗೂ ಸ್ಥಳೀಯರು ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ. ಈ ಹಿಂದೆ ಹಲವಾರು ಬಾರಿ ದೂರು ನೀಡಿದರೂ, ಸಂಬಂಧಿಸಿದ ಅಧಿಕಾರಿಗಳು ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿರುವುದನ್ನು ಸಾರ್ವಜನಿಕರು ತೀವ್ರವಾಗಿ ವಿರೋಧಿಸಿದ್ದಾರೆ. ಕಾಡಾನೆ ದಾಳಿಯಿಂದ ರೈತರು ದೈಹಿಕ ಮತ್ತು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಸಂಬಂಧ ಅರಣ್ಯ ಇಲಾಖೆ ಯಾವುದೇ ಗಂಭೀರ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.



ಈ ರೀತಿಯ ಘಟನೆಯು ಮರುಕಳಿಸಿದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವಂತೆ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಸ್ಥಳೀಯ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡು, ರೈತರ ಸಮಸ್ಯೆಗೆ ಸರಿಯಾದ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಾಡಾನೆ ತಡೆಗಟ್ಟಲು ಸೂಕ್ತ ತಂತ್ರಜ್ಞಾನ, ತಡೆಗೋಡೆ, ಮತ್ತು ಬೇಲಿ ವ್ಯವಸ್ಥೆ ಕಲ್ಪಿಸುವಂತೆ ಕೂಡ ರೈತರು ಆಗ್ರಹಿಸಿದ್ದಾರೆ.



ಈ ಘಟನೆಯು ಮತ್ತೆ ಮರುಕಳಿಸದಂತೆ, ಅರಣ್ಯ ಇಲಾಖೆ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಬೇಕಾಗಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ರೈತರು ತೀವ್ರ ಹೋರಾಟ ಹಮ್ಮಿಕೊಳ್ಳುವ ಸಾಧ್ಯತೆ ಇದೆ.

WhatsApp Image 2025-06-21 at 19.57.59
Trending Now