
ದಕ್ಷಿಣ ಕನ್ನಡ ಜಿಲ್ಲೆ :
ಕಡಬ ತಾಲ್ಲೂಕಿನ ಗೋಳಿತಟ್ಟು ಗ್ರಾಮದ ಅಂಬುಡೇಲು ಮನೆಯ ಕೃಷ್ಣ ಶೆಟ್ಟಿ ಮತ್ತು ಸುಂದರಿ ದಂಪತಿಯ ಹಿರಿಯ ಪುತ್ರರಾಗಿರುವ ಕರುಣಾಕರ ಶೆಟ್ಟಿಯವರು 1986ರ ನವೆಂಬರ್ 21ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಗೋಳಿತಟ್ಟು ಸರಕಾರಿ ಶಾಲೆಯಲ್ಲಿ ಮತ್ತು ಹೈಸ್ಕೂಲ್ ಶಿಕ್ಷಣವನ್ನು ಕೋಣಾಲು ಪ್ರೌಢಶಾಲೆಯಲ್ಲಿ ಮುಗಿಸಿದ ಇವರು ಬಡತನದ ಪರಿಣಾಮವಾಗಿ ಮುಂದಿನ ಅಧ್ಯಯನವನ್ನು ನಿಲ್ಲಿಸಬೇಕಾಯಿತು.
ಆದರೂ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಠ, ಛಲ ಹಾಗೂ ಗುರಿಯಿಂದ ಹಲವಾರು ಉದ್ಯೋಗಗಳಲ್ಲಿ ಕೆಲಸ ಮಾಡುತ್ತ ದೇಶ ಸೇವೆಯ ಕನಸನ್ನು ಬೆಳೆಸಿದ ಅವರು, ನಾಲ್ಕನೇ ಪ್ರಯತ್ನದಲ್ಲಿ ಯಶಸ್ವಿಯಾಗಿ ಭಾರತೀಯ ಭೂಸೇನೆಗೆ 2008ರ ಮಾರ್ಚ್ 24ರಂದು ಸೇರ್ಪಡೆಗೊಂಡರು.
ಪ್ರಾರಂಭದಲ್ಲಿ ಬಿಹಾರದ ಗಯಾದಲ್ಲಿ ಸೇನಾ ತರಬೇತಿಯನ್ನು ಪೂರೈಸಿದ ಅವರು, ನಂತರ ಹಿಮಾಚಲ ಪ್ರದೇಶದ ಧರ್ಮಶಾಲಾ, ಜಮ್ಮು ಕಾಶ್ಮೀರದ ಉರಿ ಸೆಕ್ಟರ್ ಹಾಗೂ ತಂಗ್ದಾರ್, ಅಸ್ಸಾಂನ ಮಿಸ್ಸಮಾರಿ, ಚೀನಾ ಗಡಿಯ ಅರುಣಾಚಲ ಪ್ರದೇಶದ ತವಾಂಗ್ ಹೋಳಿ ವಾಟರ್, ಪಂಜಾಬಿನ ಲೂದಿಯಾನಾ, ಲೇ ಲಡಾಕ್‌ನ ಅತ್ಯಂತ ಎತ್ತರದ ಹಾಗೂ ಕಠಿಣ ವಾತಾವರಣದ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದರು. ನಂತರ ಬೆಂಗಳೂರಿಗೆ ವರ್ಗಾವಣೆಗೊಂಡು, ಅಸ್ಸಾಂ ಹಾಗೂ ಮಹಾರಾಷ್ಟ್ರದ ಪುಣೆ ಸೇರಿದಂತೆ ಹಲವು ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿದರು.
ತೀವ್ರ ಶಿಸ್ತು ಮತ್ತು ನಿಷ್ಠೆಯೊಂದಿಗೆ 17 ವರ್ಷಗಳ ಸೇವೆಯ ನಂತರ 2025ರ ಮಾರ್ಚ್ 31ರಂದು ಅವರು ಸೇನೆಯಿಂದ ಗೌರವಪೂರ್ಣವಾಗಿ ನಿವೃತ್ತಿಗೊಂಡಿದ್ದಾರೆ.
ಸೇನೆಯ ಕರ್ತವ್ಯದ ನಡುವೆಯೂ ಕೇವಲ ಸೈನಿಕ ಜೀವನಕ್ಕಷ್ಟೇ ಸೀಮಿತವಾಗದೇ, ತಮ್ಮ ಊರಿನ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಂಬಂಧಿಕರು, ಗೆಳೆಯರು ಹಾಗೂ ಗ್ರಾಮಸ್ಥರೊಂದಿಗೆ ಆತ್ಮೀಯ ಬಾಂಧವ್ಯ ಬೆಳೆಸಿದ ಅವರು ಎಲ್ಲರಿಗೂ ಚಿರಪರಿಚಿತ ವ್ಯಕ್ತಿಯಾಗಿ ಹೆಸರು ಗಳಿಸಿದ್ದಾರೆ. ಅಷ್ಟೇ ಅಲ್ಲದೆ, ಉತ್ತಮ ಬರಹಗಾರರಾಗಿಯೂ ಖ್ಯಾತರಾಗಿರುವ ಅವರು ಹಲವಾರು ಊರುಗಳಲ್ಲಿ ಸ್ನೇಹಿತರ ಹಾಗೂ ಅಭಿಮಾನಿಗಳ ವಲಯವನ್ನು ನಿರ್ಮಿಸಿಕೊಂಡಿದ್ದಾರೆ.
ದೇಶ ಸೇವೆಯಲ್ಲಿನ ತಮ್ಮ ಭಾರಿ ಕೊಡುಗೆಯ ನಂತರ ನಿವೃತ್ತಿ ಜೀವನವನ್ನು ಹಸನ್ಮುಖವಾಗಿ ಕಳೆಯಲಿರುವ ಕರುಣಾಕರ ಶೆಟ್ಟಿಯವರಿಗೆ ಭಗವಂತ ಸದಾ ಆರೋಗ್ಯ ಹಾಗೂ ಸಂತೋಷ ನೀಡಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.
