
ರೋಣ ತಾಲೂಕು: ತಾಲೂಕಿನ ಕೊತಬಾಳ ಗ್ರಾಮದಲ್ಲಿ ಮಾನವೀಯತೆಯನ್ನು ಕಾದಿಟ್ಟ ಘಟನೆಯೊಂದು ಬೆಳಕಿಗೆ ಬಂದಿದೆ. ಶುಕ್ರವಾರ ನಸುಕಿನ ಜಾವ, ಖಾಲಿ ರಸ್ತೆಯ ಪಕ್ಕದಲ್ಲಿ ಅನಾಥ ಗಂಡು ಶಿಶುವೊಂದು ಪತ್ತೆಯಾಗಿದೆ. ಘಟನೆಯು ಇಡೀ ಊರಿನಲ್ಲಿ ಚರ್ಚೆಗೆ ಕಾರಣವಾಗಿದೆ.
ಗ್ರಾಮದ ರೈತರೊಬ್ಬರು ಬೆಳಿಗ್ಗೆ ಹೊಲದತ್ತ ಹೋಗುತ್ತಿದ್ದ ಸಂದರ್ಭದಲ್ಲಿ ಮಗು ಅಳುತ್ತಿರುವ ಶಬ್ದ ಕೇಳಿ ಶಂಕೆಗೊಂಡು ಸ್ಥಳಕ್ಕೆ ಧಾವಿಸಿದ್ದಾರೆ. ಅವರು ತಕ್ಷಣಕ್ಕೆ ಮಾಹಿತಿ ನೀಡಿದ ಅಂಗನವಾಡಿ ಕಾರ್ಯಕರ್ತೆ ಸ್ಥಳಕ್ಕೆ ಆಗಮಿಸಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ವಿಷಯವನ್ನು ತಕ್ಷಣ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಶಿವಗಂಗಮ್ಮ ಅವರಿಗೆ ತಿಳಿಸಿದ್ದಾರೆ.
ಶಿವಗಂಗಮ್ಮ ಅವರು ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಮಗುವಿಗೆ ತಕ್ಷಣ ವೈದ್ಯಕೀಯ ಸಹಾಯ ನೀಡಲು ಕ್ರಮ ಕೈಗೊಂಡರು. ಮಗು ಸಂಪೂರ್ಣ ಆರೋಗ್ಯವಾಗಿರುವುದು ದೃಢಪಟ್ಟ ನಂತರ ತಕ್ಷಣ ಗದಗ ಜಿಲ್ಲೆಯ ಮಕ್ಕಳ ಕಲ್ಯಾಣ ಇಲಾಖೆಗೆ ಮಗುವನ್ನು ಹಸ್ತಾಂತರಿಸಲಾಯಿತು.
ಈ ಕುರಿತು ಶಿಶು ಅಭಿವೃದ್ಧಿ ಅಧಿಕಾರಿ ಶಿವಗಂಗಮ್ಮ ಅವರು ಮಾತನಾಡಿ, “ಮಗುವಿಗೆ ತಕ್ಷಣ ಚಿಕಿತ್ಸೆ ನೀಡಲಾಗಿದ್ದು, ಇದೀಗ ಮಗು ಸುರಕ್ಷಿತವಾಗಿದೆ. ಆದರೆ ಈ ಶಿಶುವಿನ ಪೋಷಕರು ಯಾರು ಎಂಬುದು ತಿಳಿದಿಲ್ಲ. ಈ ಕುರಿತಾಗಿ ಮುಂದಿನ ಕ್ರಮಗಳನ್ನು ಕಾನೂನು ಪ್ರಕಾರ ಕೈಗೊಳ್ಳಲಾಗುತ್ತದೆ,” ಎಂದರು.
ಬಾಕ್ಸ್ ಮಾಹಿತಿ:
ನವಜಾತ ಶಿಶುಗಳನ್ನು ರಸ್ತೆಗೆ ಬಿಟ್ಟು ಹೋಗುವುದು ಅಮಾನ್ಯ ಮತ್ತು ಕಾನೂನುಬಾಹಿರ. ಮಗುವನ್ನು ಸಾಕಲು ಸಾಧ್ಯವಿಲ್ಲದೆ ಇದ್ದರೆ ಅಥವಾ ಬೇಡವಾಯಿತು ಎಂದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಾಯವನ್ನು ಪಡೆಯಬಹುದು. ಸರ್ಕಾರ ನಿರ್ವಹಣೆಯಲ್ಲಿರುವ “ತೊಟ್ಟಿಲು ಕೇಂದ್ರಗಳು” ಅಂತಹ ಮಕ್ಕಳಿಗೆ ಆಶ್ರಯ ನೀಡುವ ಕಾರ್ಯ ಮಾಡುತ್ತವೆ. ಜೊತೆಗೆ, ಮಗು ಬೇಕೆಂದವರು ಅಧಿಕೃತ “ದತ್ತು ಕೇಂದ್ರ”ಗಳ ಮೂಲಕ ಕಾನೂನುಬದ್ಧವಾಗಿ ಮಕ್ಕಳನ್ನು ದತ್ತು ಪಡೆಯಬಹುದು.
ಈ ಘಟನೆಯು ಸಮಾಜದ ದಿಟ್ಟ ಕಣ್ಣಿಗೆ ಎದ್ದುಬಂದಿರುವುದಾದರೂ, ಇಂತಹ ಘಟನೆಗಳು ಮರುಕಳಿಸದಂತೆ ಸಾರ್ವಜನಿಕರ ಜಾಗೃತಿ ಮತ್ತು ಹೊಣೆಗಾರಿಕೆಯಿಂದಲೇ ಸಾಧ್ಯ ಎಂಬುದು ಸ್ಪಷ್ಟವಾಗುತ್ತಿದೆ.