
ಕಂಪ್ಲಿ: ತಾಲೂಕಿನ ಮೆಟ್ರಿ ಗ್ರಾಮದ ಶ್ರೀ ಕೆ. ಶಂಕರ ಮೆಟ್ರಿಯವರು ಪ್ರತಿಷ್ಠಿತ “ಕಲಾ ಸೇವಾ ರತ್ನ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕನ್ನಡ ಫಿಲಂ ಚೇಂಬರ್, ಬೆಂಗಳೂರು ಅವರ ಕಲಾ ಸೇವೆಯನ್ನು ಪರಿಗಣಿಸಿ, ಈ ಗೌರವ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆ.
ಈ ಪ್ರಶಸ್ತಿ ಕನ್ನಡ ಚಿತ್ರರಂಗದ ದಿಗ್ಗಜ, ವರನಟ ಡಾ. ರಾಜಕುಮಾರ್ ಅವರ ಸ್ಪೂರ್ತಿದಾಯಕ ಸೇವೆಯನ್ನು ಸ್ಮರಿಸುವ ಪ್ರತಿಷ್ಠಿತ ಗೌರವವಾಗಿದೆ. ಮಾರ್ಚ್ 23, 2025ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.
ಕಲಾ ಸೇವೆಯಲ್ಲಿ ಶಂಕರ ಮೆಟ್ರಿಯವರ ಸಾಧನೆ
ಶಂಕರ ಮೆಟ್ರಿಯವರು 18 ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ನಟ, ನಿರ್ದೇಶಕ, ತಂತ್ರಜ್ಞ ಹಾಗೂ ನಾಟಕಕಾರನಾಗಿ 50ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ, 800ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಅಲ್ಲದೆ, 4 ದಾರಾವಾಹಿ, 3 ಚಲನಚಿತ್ರ ಮತ್ತು 8 ಕಿರುಚಿತ್ರಗಳಲ್ಲಿ ಭಿನ್ನ ಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಪ್ರಸ್ತುತ, ಅವರು ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ನಾಟಕಕಲೆಯಲ್ಲಿ ಸಂಶೋಧನೆಯನ್ನು ಮುಂದುವರೆಸಿದ್ದಾರೆ. ಅವರ ಈ ಅಮೂಲ್ಯ ಸೇವೆಯನ್ನು ಗೌರವಿಸಿ, ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಇದು ಕಲಾ ಲೋಕದ ಗೌರವಕ್ಕೆ ತಕ್ಕ ಸಾಧನೆ ಎಂದು ಕಲಾವಿದರು, ಹಿತೈಷಿಗಳು ಮತ್ತು ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.