
ಕಡಬ ತಾಲ್ಲೂಕು ಗೋಳಿತಟ್ಟು ಗ್ರಾಮದ ಅಂಬುಡೇಲು ಮನೆಯ ಕೃಷ್ಣ ಶೆಟ್ಟಿ ಮತ್ತು ಸುಂದರಿ ದಂಪತಿಯ ಮೊದಲ ಮಗುವಾಗಿ 1986ರ ನವೆಂಬರ್ 21 ರಂದು ಜನಿಸಿದ ಕರುಣಾಕರ ಶೆಟ್ಟಿಯವರು, ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಆರಂಭಿಸಿದರು. ಹೈಸ್ಕೂಲ್ ಶಿಕ್ಷಣವನ್ನು ಕೋಣಾಲು ಪ್ರೌಡಶಾಲೆಯಲ್ಲಿ ಪೂರ್ಣಗೊಳಿಸಿದ ಅವರು, ಬಡತನದ ಕಾರಣದಿಂದ ಮುಂದಿನ ವಿದ್ಯಾಭ್ಯಾಸವನ್ನು ಮುಂದುವರಿಸಲಿಲ್ಲ.
ತಮ್ಮ ಜೀವನದ ಗುರಿಯನ್ನು ಸಾಧಿಸಲು ಹಲವು ಕಠಿಣ ಕೆಲಸಗಳನ್ನು ನಿರ್ವಹಿಸುತ್ತ, ಸ್ವಲ್ಪ ಸ್ವಲ್ಪ ಗಳಿಕೆಯಲ್ಲಿ ಸೇನಾ ನೇಮಕಾತಿಗಳಲ್ಲಿ ಭಾಗವಹಿಸುತ್ತಿದ್ದರು. ನಿರಂತರ ಪ್ರಯತ್ನದ ಫಲವಾಗಿ, 2008ರ ಮಾರ್ಚ್ 24ರಂದು ಭಾರತೀಯ ಭೂಸೇನೆಯಲ್ಲಿ ಸೇರ್ಪಡೆಯಾದ ಅವರು, ಬಿಹಾರದ ಗಯಾದಲ್ಲಿ ತೀವ್ರ ತರಬೇತಿಯನ್ನು ಪಡೆದು, ಹಿಮಾಚಲದ ಧರ್ಮಶಾಲಾ ಸೇರಿ ಜಮ್ಮು ಕಾಶ್ಮೀರದ ಉರಿ ಸೆಕ್ಟರ್, ತಂಗ್ ದಾರ್, ಅರೂಣಾಚಲ ಪ್ರದೇಶದ ತವಂಗ್, ಪಂಜಾಬಿನ ಲೂದಿಯಾನಾ, ಲಡಾಖ್, ಬೆಂಗಳೂರು, ಅಸ್ಸಾಂ ಮತ್ತು ಕೊನೆಗೆ ಮಹಾರಾಷ್ಟ್ರದ ಪುಣೆಯವರೆಗೆ ವಿವಿಧ ಸೈನಿಕ ನಿಯುಕ್ತಿಗಳಲ್ಲಿ ಕರ್ತವ್ಯ ನಿರ್ವಹಿಸಿದರು.
ಸೇನೆಯ ಸೇವೆಯ ಜೊತೆಗೆ ಊರಿನ ಸಂಘ–ಸಂಸ್ಥೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಬಂಧಿಕರು, ಗೆಳೆಯರು, ಊರವರೊಂದಿಗೆ ಆತ್ಮೀಯ ಸಂಬಂಧ ಬೆಳೆಸಿಕೊಂಡಿದ್ದರು. ಉತ್ತಮ ಬರಹಗಾರರಾಗಿಯೂ ಗುರುತಿಸಿಕೊಂಡ ಕರುಣಾಕರ ಶೆಟ್ಟಿಯವರು ದೇಶದ ವಿವಿಧ ಭಾಗಗಳಲ್ಲಿ ಆತ್ಮೀಯರ ಬಳಗವನ್ನು ರೂಪಿಸಿಕೊಂಡಿದ್ದಾರೆ.
ಸೈನಿಕ ವೃತ್ತಿಜೀವನದ 17ನೇ ವರ್ಷದಲ್ಲಿ, ಅಂದರೆ 2025ರ ಮಾರ್ಚ್ 31ರಂದು ಅವರು ಗೌರವನೀಯ ನಿವೃತ್ತಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ದೇಶ ಸೇವೆ ಹಾಗೂ ಸಮಾಜದ ಒಳಿತಿಗೆ ಎಂದೆಂದಿಗೂ ಬದ್ಧನಾಗಿರುವ ಅವರ ನಿವೃತ್ತಿ ಜೀವನವು ಸಂತೋಷಕರವಾಗಿರಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.