
ಜೆಡಿಎಸ್ ಪಕ್ಷದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಹಾಗೂ ಅಪಹರಣ ಪ್ರಕರಣದಲ್ಲಿ ತಪ್ಪಿತಸ್ಥ ಎನ್ನುವುದು ಸಾಬೀತಾಗಿದ್ದು, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ಹಾಗೂ ₹5 ಲಕ್ಷ ದಂಡ ವಿಧಿಸಿದೆ.
ಕೆಆರ್ ನಗರ ಮೂಲದ ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಅಪಹರಿಸಿದ್ದ ಪ್ರಕರಣದಲ್ಲಿ ತೀವ್ರ ವಿಚಾರಣೆ ನಡೆದಿದ್ದು, ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಈ ತೀರ್ಪು ನೀಡಿದರು. ಕೇವಲ ನಾಲ್ಕು ತಿಂಗಳ ಒಳಗೆ ಈ ತೀರ್ಪು ಹೊರಬಿದ್ದಿರುವುದು ಗಮನಾರ್ಹವಾಗಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದ ಮೂರು ಅತ್ಯಾಚಾರ ಮತ್ತು ಒಂದು ಲೈಂಗಿಕ ದೌರ್ಜನ್ಯ ಪ್ರಕರಣಗಳ ಪೈಕಿ ಇದೊಂದು ತೀರ್ಪಿಗೆ ಬಂದಿದೆ. ಶುಕ್ರವಾರದ ತೀರ್ಪಿನಲ್ಲಿ ಪ್ರಜ್ವಲ್ ದೋಷಿ ಎಂಬುದು ಸಾಬೀತಾಗಿ, ಶಿಕ್ಷೆಯ ಪ್ರಮಾಣವನ್ನು ಶನಿವಾರ ಘೋಷಿಸಲು ನ್ಯಾಯಾಲಯ ಮುಂದೂಡಿತ್ತು.
ಇಂದು ಬೆಳಗ್ಗೆ ನಡೆದ ವಾದ-ಪ್ರತಿವಾದದ ನಡುವೆಯೇ ತೀರ್ಪು ಪ್ರಕಟವಾಗಿದ್ದು, ಪ್ರಾಸಿಕ್ಯೂಷನ್ ಪರ ವಕೀಲರಾದ ಬಿ.ಎನ್ ಜಗದೀಶ್ ಮತ್ತು ಎಸ್‌ಪಿಪಿ ಅಶೋಕ್ ನಾಯಕ್ ಅವರು ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದರು. ಪ್ರಜ್ವಲ್ ಪರ ವಕೀಲೆ ನಳಿನಿ ಮಾಯೇಗೌಡ ಅವರು, ಶಿಕ್ಷೆ ನೀಡುವಾಗ ಅಪರಾಧಿಯ ರಾಜಕೀಯ ಭವಿಷ್ಯ, ವಯಸ್ಸು ಮತ್ತು ಇತರ ಲಘುವ್ಯಾಯಾಮ ಕಾರಣಗಳನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದ್ದರು✍🏻✍🏻✍🏻
ವರದಿ : ಯೊಗೇಶ್ ಹಾಸನ