September 10, 2025
sathvikanudi - ch tech giant

ತುಮಕೂರು: 18 ಜೋಡಿಗಳನ್ನು ಪುನರ್ ಒಂದು ಮಾಡಿದ ತುಮಕೂರು ನ್ಯಾಯಾಲಯ……….

Spread the love


ತುಮಕೂರು:

ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 13 ಜೋಡಿಗಳನ್ನು ಪುನಃ ಒಂದು ಮಾಡಿ ಗಂಡನ ಮನೆಗೆ ಕಳುಹಿಸಿದ ವಿಶೇಷ ಪ್ರಸಂಗ ನಡೆಯಿತು.

ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್’ನಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳ ವಾದ-ವಿವಾದಗಳನ್ನು ಆಲಿಸಿ, ಎರಡೂ ಕಡೆಯ ವಕೀಲರನ್ನು ಸಂಪರ್ಕಿಸಿ ಅವರ ಸಮ್ಮುಖದಲ್ಲಿ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಯಂತ್ ಕುಮಾರ್ ರವರು ಗಂಡ-ಹೆಂಡತಿಯನ್ನು ಒಂದು ಮಾಡಿದರು. “ದಂಪತಿಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಚಿಕ್ಕ ವಿಚಾರಗಳಿಗೆ ಮನಸ್ಥಾಪ ಮಾಡಿಕೊಳ್ಳಬಾರದು. ಮಕ್ಕಳ ಹಿತಕ್ಕಾಗಿ ಹಾಗೂ ಹಿರಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. ಅವರ ಮನಸ್ಸಿಗೆ ಘಾಸಿ ಮಾಡಬಾರದು,” ಎಂದು ಅವರು ಬುದ್ದಿ ಹೇಳಿದರು. ಪರಸ್ಪರ ಹಾರ ಬದಲಾಯಿಸಿ, ಸಿಹಿ ತಿನ್ನಿಸಿ, ಒಂದು ಮಾಡಿ ಮನೆಗೆ ಕಳಿಸಿದರು.

ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಮುನಿರಾಜುರವರು, “ಗಂಡ-ಹೆಂಡತಿ ಎರಡು ಕೈಗಳಿದ್ದಂತೆ. ಒಂದು ಕೈ ಏನೂ ಕೆಲಸ ಮಾಡಲಾಗದು, ಎರಡೂ ಕೈ ಇದ್ದರೆ ಚಪ್ಪಾಳೆ. ಇಬ್ಬರೂ ಒಬ್ಬರನ್ನೊಬ್ಬರು ನಂಬಬೇಕು. ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಯಿಂದ ಜೀವನ ನಡೆಸಿದಾಗ, ಸಮಾಜದಲ್ಲಿ ಶಾಂತಿ ಸಾಧ್ಯ. ನೀವು ಸಹ ಅಭಿವೃದ್ಧಿ ಹೊಂದುತ್ತೀರಿ,” ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸ ಅವರು, “ಮಕ್ಕಳ ಭವಿಷ್ಯದ ದೃಷ್ಟಿಯಿಂದ, ತಂದೆ-ತಾಯಿ, ಅತ್ತೆ-ಮಾವನವರ ಹಿತದೃಷ್ಟಿಯಿಂದ ಇಬ್ಬರೂ ಒಂದಾಗಬೇಕು. ಗಂಡ-ಹೆಂಡತಿ ಜೊತೆಯಲ್ಲಿದ್ದರೆ ಅದಕ್ಕೆ ಬೆಲೆ. ಕುಟುಂಬ ಮುಖ್ಯ. ಪುನಃ ಜಗಳವಾಡಿ ನ್ಯಾಯಾಲಯಕ್ಕೆ ಅರ್ಜಿ ಹಾಕಿಕೊಂಡು ಬರಬೇಡಿ. ನೂರಾರು ಕಾಲ ಸಂತಸದಿಂದ ಜೀವನ ಸಾಗಿಸಿ,” ಎಂದು ಶುಭ ಹಾರೈಸಿದರು.

ಮಧುಗಿರಿ ನ್ಯಾಯಾಲಯದಲ್ಲಿ 2, ಪಾವಗಡದಲ್ಲಿ 1, ತಿಪಟೂರಿನಲ್ಲಿ 1, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ 1, ಕೌಟುಂಬಿಕ ನ್ಯಾಯಾಲಯದಲ್ಲಿ 13, ಒಟ್ಟು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ 18 ಜೋಡಿಗಳು ಪುನಃ ಒಂದಾಗಿ ಮನೆಗೆ ತೆರಳಿದರು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಮಾಹಿತಿ ನೀಡಿದರು.

WhatsApp Image 2025-06-21 at 19.57.59
Trending Now