September 9, 2025
sathvikanudi - ch tech giant

ಉಡುಪಿ: ಕೆಳಾರ್ಕಳ ಬೆಟ್ಟು ಗ್ರಾಮದಲ್ಲಿ ಚರಂಡಿ ಶುದ್ಧೀಕರಣ ಕಾರ್ಯಕ್ಕೆ ಪ್ರಶಂಸೆ

Spread the love



ಉಡುಪಿ ತಾಲೂಕು ತೆಂಕನಿಡಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಳಾರ್ಕಳ ಬೆಟ್ಟು ಗ್ರಾಮದ ಮೊದಲ ವಾರ್ಡ್‌ನಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಚರಂಡಿ ಶುದ್ಧೀಕರಣ ಕಾರ್ಯ ನಡೆಯಿತು. ಇತ್ತೀಚಿನ ಮಳೆಗಾಲದಲ್ಲಿ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದ್ದ ಪರಿಣಾಮ, ಮಳೆ ನೀರು ಸರಿಯಾಗಿ ಹರಿಯದೆ ಮನೆಗಳಿಗೆ ನುಗ್ಗುವ ಸ್ಥಿತಿ ಉಂಟಾಗಿ, ಕೃತಕ ನೆರೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದರು.



ಸಮಸ್ಯೆ ಗಂಭೀರ ಸ್ಥಿತಿಗೆ ತಲುಪುವ ಮೊದಲು ಗ್ರಾಮ ಪಂಚಾಯತ್ ಸದಸ್ಯೆ ಅನುಷಾ ಆಚಾರ್ಯರವರು ತಕ್ಷಣವೇ ಸ್ಪಂದಿಸಿ, ಚರಂಡಿ ಹೂಳೇತ್ತುವ ಕಾರ್ಯವನ್ನು ಆರಂಭಿಸಿ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾದರು. ಅವರ ಈ ಜವಾಬ್ದಾರಿಯುತ ನಡೆ ಸಾರ್ವಜನಿಕ ಸೇವೆಯ ಪ್ರತಿಬಿಂಬವಾಗಿದೆ ಎಂಬುದಾಗಿ ಸ್ಥಳೀಯರು ಹೇಳಿದರು. ಚರಂಡಿ ಶುದ್ಧೀಕರಣ ಕಾರ್ಯವನ್ನು ವೀಕ್ಷಿಸುತ್ತಿರುವುದು ಮಾತ್ರವಲ್ಲದೇ, ಸದಸ್ಯೆ ಸ್ವತಃ ಸ್ಥಳದಲ್ಲೇ ನಿಂತು ಕಾರ್ಯದ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಿರುವುದು ಗಮನಾರ್ಹವಾಗಿದೆ.



ಈ ಸಂದರ್ಭದಲ್ಲಿ ಎರಡನೇ ವಾರ್ಡ್‌ನ ಸದಸ್ಯರಾದ ಸತೀಶ್ ನಾಯ್ಕ್ ಅವರು ಸಹ ಉಪಸ್ಥಿತರಿದ್ದು, ಸಾರ್ವಜನಿಕರ ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಸತತ ಪ್ರಯತ್ನಶೀಲವಾಗಿದೆ ಎಂಬುದನ್ನು ಪುನರುಚಿಸಿಕೊಂಡರು. ಗ್ರಾಮ ಪಂಚಾಯತ್ ಸಿಬ್ಬಂದಿಯ ಸಹಕಾರದಿಂದ ಶುದ್ಧೀಕರಣ ಕಾರ್ಯ ವೇಗವಾಗಿ ಮುಕ್ತಾಯಗೊಂಡಿದೆ.



ಗ್ರಾಮಸ್ಥರು ಈ ಕಾರ್ಯಕ್ಕೆ ಸಂತೋಷ ವ್ಯಕ್ತಪಡಿಸಿದ್ದು, ಈ ರೀತಿಯ ಸಮಯೋಚಿತ ಕ್ರಮಗಳು ಮುಂದೆಯೂ ಕೈಗೊಳ್ಳಲಾಗಲಿ ಎಂಬ ನಿರೀಕ್ಷೆ ಹೊಂದಿದ್ದಾರೆ. ಜನಪರ ಆಡಳಿತವೆಂಬ ಅಂಶವನ್ನು ಈ ಘಟನೆ ಮತ್ತೊಮ್ಮೆ ನೆನಪಿಸುತ್ತಿದ್ದು, ಪಂಚಾಯತ್ ಸದಸ್ಯೆಯ ಪಾತ್ರ ಸಾರ್ವಜನಿಕ ಸೇವೆಯಲ್ಲಿ ಮಾದರಿಯಾಗಿದ್ದು, ಇತರ ಪ್ರದೇಶಗಳಿಗೂ ಪ್ರೇರಣೆಯಾಗಿದೆ.

ರಾಜೇಶ್ :ಉಡುಪಿ ಜಿಲ್ಲಾ ವರದಿಗಾರರು

WhatsApp Image 2025-06-21 at 19.57.59
Trending Now