
ಕೋಲಾರ:
ಮಾಲೂರು, ಜೂನ್ 17:
ತಾಲೂಕಿನ ಕೊತ್ತೂರು ಗ್ರಾಮದಲ್ಲಿ ಇಂದು ಮಧ್ಯಾಹ್ನ ಭಯಾನಕ ಘಟನೆ ಸಂಭವಿಸಿದ್ದು, ಮೇಕೆ ಮೇಯಿಸುತ್ತಿದ್ದ ರೈತನೊಬ್ಬನ ಮೇಲೆ ಕರಡಿ ದಾಳಿ ನಡೆಸಿದೆ. ಪರಿಣಾಮವಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಾಸ್ತಿ ಹೋಬಳಿ, ದಿನ್ನೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ತೂರು ಗ್ರಾಮದ ರೈತ ನಾರಾಯಣಸ್ವಾಮಿ ಅವರು ತಮ್ಮ ಮೇಕೆಗಳನ್ನು ಸಮೀಪದ ಗುಡ್ಡ ಪ್ರದೇಶದಲ್ಲಿ ಮೇಯಿಸುತ್ತಿದ್ದಾಗ ಈ ದಾಳಿಗೆ ಒಳಗಾಗಿದ್ದಾರೆ. ಕರಡಿ ಏಕಾಏಕಿ ಹಲ್ಲೆಗೆ ಮುಂದಾಗಿ, ಅವರ ಮುಖ ಹಾಗೂ ಕೈ ಭಾಗವನ್ನು ತೀವ್ರವಾಗಿ ಕಚ್ಚಿದೆ.
ಗಾಯಗೊಂಡ ನಾರಾಯಣಸ್ವಾಮಿ ಅವರನ್ನು ತಕ್ಷಣವೇ ಸ್ಥಳೀಯರ ನೆರವಿನಿಂದ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಅವರು ಗಂಭೀರ ಸ್ಥಿತಿಯಲ್ಲಿ ಇದ್ದರೂ ಚಿಕಿತ್ಸೆ ನೀಡುತ್ತಿದ್ದಾರೆಂದು ತಿಳಿಸಿದ್ದಾರೆ.
ಘಟನೆಯ ಬಳಿಕ ಸ್ಥಳೀಯರಲ್ಲಿ ಆತಂಕ ಮನೆಮಾಡಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಕರಡಿ ಸಂಚಾರವಿರುವ ಕುರಿತು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುತ್ತಿದೆ.
“ಅರಣ್ಯ ಇಲಾಖೆ ತಕ್ಷಣ ಕ್ರಮ ತೆಗೆದು, ಇಂತಹ ಘಟನೆಗಳು ಮರುಕಳಿಸದಂತೆ ದೃಢ ನಿಗಾವಹಿಸಲಿ.”ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.