September 10, 2025
sathvikanudi - ch tech giant

ಮಾಹಿತಿಹಕ್ಕು ಬಳಕೆದಾರರ ಕಪ್ಪುಪಟ್ಟಿ ವಿರುದ್ಧ ಬೃಹತ್ ಪ್ರತಿಭಟನೆ.!?

Spread the love



ತುಮಕೂರು:  ಮಾಹಿತಿಹಕ್ಕು ಕಾಯಿದೆ-2005 ಅನ್ನು ಭ್ರಷ್ಟಾಚಾರ ನಿರ್ಮೂಲನೆ, ಪಾರದರ್ಶಕ ಆಡಳಿತ ಮತ್ತು ನಾಗರೀಕರ ಹಕ್ಕುಗಳ ರಕ್ಷಣೆಗಾಗಿ ಜಾರಿಗೆ ತಂದಿದ್ದು, ಇದನ್ನು ಅನೇಕ RTI ಬಳಕೆದಾರರು, ಸಾಮಾಜಿಕ ಹೋರಾಟಗಾರರು ತಮ್ಮ ಹಕ್ಕುಗಳಿಗಾಗಿ ಉಪಯೋಗಿಸಿಕೊಂಡಿದ್ದಾರೆ. ಆದರೆ, 20ಕ್ಕೂ ಹೆಚ್ಚು ಮಾಹಿತಿಹಕ್ಕು ಬಳಕೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಅವರನ್ನು ವಜಾಗೊಳಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

RTI ಬಳಕೆದಾರರ ವಿರುದ್ಧ ಕಾನೂನುಬಾಹಿರ ಕ್ರಮ:

ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುತ್ತಿರುವ RTI ಬಳಕೆದಾರರು, ತಮ್ಮ ಅರ್ಜಿಗಳನ್ನು ನಿರಂತರವಾಗಿ ಸಲ್ಲಿಸುತ್ತಿರುವುದರಿಂದ, ಅಧಿಕಾರಿಗಳು ಅವರ ವಿರುದ್ಧ ಸುಳ್ಳು ಕಾರಣಗಳ ಆಧಾರದಲ್ಲಿ ಕ್ರಮ ಕೈಗೊಂಡಿದ್ದಾರೆ. RTI ಅರ್ಜಿಗಳ ಸಂಖ್ಯೆ 500 ಅಥವಾ 1000 ದಾಟಿದರೆ, ಅವರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಅಧಿಕಾರಿಗಳು ತೀರ್ಮಾನಿಸಿರುವುದು ಉಲ್ಲೇಖನೀಯ. ಈ ಕ್ರಮ RTI ಕಾಯಿದೆಯ ಉಲ್ಲಂಘನೆ ಎಂಬ ಗಂಭೀರ ಆರೋಪ ಎದುರಿಸುತ್ತಿದೆ.

ಬೃಹತ್ ಪ್ರತಿಭಟನೆಯ ಎಳೆ:

ಈ ಅನ್ಯಾಯವನ್ನು ಖಂಡಿಸಿ, ರಾಜ್ಯ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಡಾ.ಎಸ್.ಆರ್.ರಾಘವೇಂದ್ರ ನೇತೃತ್ವದಲ್ಲಿ, ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. “ಡಾ.ಸತ್ಯನ್ ಹಟಾವೂ – ಮಾಹಿತಿ ಹಕ್ಕು ಬಚಾವೂ”, “ಮಾಹಿತಿಹಕ್ಕು ಬಳಕೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿರುವ ಡಾ.ಸತ್ಯನ್ ಗೆ ಧಿಕ್ಕಾರ – ಮಾಹಿತಿ ಆಯೋಗಕ್ಕೆ ಧಿಕ್ಕಾರ” ಎಂಬ ಘೋಷಣೆಗಳನ್ನು ಕೂಗುತ್ತಾ, ಪ್ರತಿಭಟನೆಯಲ್ಲಿ ಜನಸಂದಣಿ ಕಂಡುಬಂದಿತು.

ಪೊಲೀಸ್ ಬಂದೋಬಸ್ತ್ – ಸಂಘಟನೆಗಳ ಬೆಂಬಲ:

ಅಹಿತಕರ ಘಟನೆಗಳನ್ನು ತಡೆಯಲು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ಪ್ರತಿಭಟನೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ಅಪ್ಪಾಜಿ, ದೇವನಹಳ್ಳಿಯ ಸುನಿಲ್‌, ತುಮಕೂರು ಕೋರ್ ಕಮಿಟಿಯ ಗಿರೀಶ್ ಜಿ ಮುಂತಾದವರು ಭಾಗವಹಿಸಿದ್ದರು. RTI ಬಳಕೆದಾರರ ಒಕ್ಕೂಟ, ದಲಿತ ಸಂಘರ್ಷ ಸಮಿತಿ (DSS), ಅಂಬೇಡ್ಕರ್ ಜನಸೇನಾ, ಸತ್ಯಶೋಧನಾ ಸಮಿತಿ ಸೇರಿದಂತೆ ಹಲವಾರು ಸಾಮಾಜಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು.

ಸರ್ಕಾರಕ್ಕೆ ಒತ್ತಾಯ:

ಈ ಅಕ್ರಮ ನಿರ್ಧಾರವನ್ನು ತಕ್ಷಣ ವಾಪಸ್ ಪಡೆಯಬೇಕು ಮತ್ತು RTI ಬಳಕೆದಾರರ ವಿರುದ್ಧ ದೌರ್ಜನ್ಯ ನಡೆಸುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. RTI ಕಾಯಿದೆಯ ರಕ್ಷಣೆಗೆ ಸರ್ಕಾರ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಬೇಕು, ಇಲ್ಲವಾದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಸಂಘಟನೆಗಳ ನಾಯಕರು ಎಚ್ಚರಿಸಿದರು.

– ವರದಿ:     ಡಾ.ಗಿರೀಶ್ ಜಿ ವಾಲ್ಮೀಕಿ

ದೂರವಾಣಿ ಸಂಖ್ಯೆ 9986742717

WhatsApp Image 2025-06-21 at 19.57.59
Trending Now