
ಬೆಂಗಳೂರು, ಫೆಬ್ರವರಿ 04:
ಬಿಎಂಟಿಸಿ ಬಸ್‌ಗಳಲ್ಲಿ ನಡೆದ ಯುಪಿಐ ಸ್ಕ್ಯಾನರ್ ವಂಚನೆಯ ಬೆನ್ನಲ್ಲೇ ಇದೀಗ ಬೆಂಗಳೂರಿನ ಪ್ರಮುಖ ಸರ್ಕಾರಿ ಆಸ್ಪತ್ರೆಯಾದ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್ ಬೆಳಕಿಗೆ ಬಂದಿದೆ. ರೋಗಿಗಳ ಅನುಕೂಲಕ್ಕಾಗಿ ಅಳವಡಿಸಿದ್ದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡ ಕೆಲ ಆಸ್ಪತ್ರೆ ಸಿಬ್ಬಂದಿ QR ಕೋಡ್ ಬದಲಿಸಿ ಸುಮಾರು ₹23 ಲಕ್ಷಕ್ಕೂ ಅಧಿಕ ಹಣವನ್ನು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ.
ಲ್ಯಾಬ್, OPD ಹಾಗೂ ಎಕ್ಸ್‌ರೇ ವಿಭಾಗಗಳಲ್ಲಿ ಅಧಿಕೃತ QR ಕೋಡ್‌ಗಳನ್ನು ತೆಗೆದುಹಾಕಿ, ಸಿಬ್ಬಂದಿ ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್‌ಗಳನ್ನು ಅಳವಡಿಸಿದ್ದರು. ರೋಗಿಗಳ ಪಾವತಿಗಳ ಬಗ್ಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಆಸ್ಪತ್ರೆ ಅಧೀಕ್ಷಕ ಡಾ. ದೀಪಕ್ ಅವರು ಸಮಿತಿಯನ್ನು ರಚಿಸಿ ತನಿಖೆ ನಡೆಸಿದಾಗ ಈ ವಂಚನೆ ಬಯಲಾಗಿದೆ.
ತನಿಖೆಯ ನಂತರ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಬಂಧಿತ ಸಿಬ್ಬಂದಿ ವಿರುದ್ಧ ಕಾನೂನು ಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ.
